Sunday 21 August 2011

ರಾಷ್ಟ್ರಧ್ವಜದ ದುರುಪಯೋಗ ತಡೆಗಟ್ಟಿರಿ!


  • ಹರಿದ ಅಥವಾ ಸುಕ್ಕಾದ ಧ್ವಜಗಳನ್ನು ಉಪಯೋಗಿಸ ಬೇಡಿರಿ.
  • ತೋರಣ, ಗುಚ್ಛ ಅಥವಾ ಪತಾಕೆಯಂತೆ, ಅಲಂಕಾರಕ್ಕೆಂದು ಧ್ವಜಗಳನ್ನು ಬಳಸಬೇಡಿರಿ. ಅದೇ ರೀತಿ ಇತರ ಬಣ್ಣದ ಬಟ್ಟೆಯ ತುಂಡುಗಳನ್ನು ರಾಷ್ಟ್ರಧ್ವಜದಂತೆ ಜೋಡಿಸಬೇಡಿರಿ.
  •  ಕೇಸರಿ ಬಣ್ಣದ ಪಟ್ಟಿಯನ್ನು ಕೆಳಗಡೆ ಮಾಡಿ ಧ್ವಜವನ್ನು ಹಾರಿಸಬೇಡಿರಿ.ಧ್ವಜವು ನೆಲಕ್ಕೆ ಸ್ಪರ್ಶಿಸದಂತೆ ಎಚ್ಚರಿಕೆ ವಹಿಸಿರಿ.
  • ಧ್ವಜವು ಹರಿದು ಹೋಗದಂತೆ ಜಾಗ್ರತೆ ವಹಿಸಬೇಕು. ಕೆಲವೊಮ್ಮೆ ರಾಷ್ಟ್ರಧ್ವಜದ ಅಯೋಗ್ಯ ಬಳಕೆ ಆಗುತ್ತದೆ. ಉದಾ. ಟೀ-ಶರ್ಟ್‌ನ ಮೇಲೆ ಧ್ವಜದ ಮೂರು ಪಟ್ಟಿಗಳನ್ನು ಹಾಕುವುದು, ಜಾಹೀರಾತುಗಳಲ್ಲಿ ಧ್ವಜದ ಉಪಯೋಗ ಮಾಡುವುದು ಇತ್ಯಾದಿ. ನಮ್ಮಿಂದ ಧ್ವಜದ ಅಪಮಾನವಾಗದಂತೆ ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ.
ರಾಷ್ಟ್ರಧ್ವಜದ ಬಹಿರಂಗ ಮಾರಾಟ ಮತ್ತು ಮಾರಾಟದ ನಂತರ ಆಗುವ ಅವಮಾನ
ಆಗಸ್ಟ್ ೧೫ ಮತ್ತು ಜನವರಿ ೨೬ರ ರಾಷ್ಟ್ರೀಯ ಹಬ್ಬದ ದಿನಗಳಂದು ವ್ಯಾವಹಾರಿಕ ಲಾಭಕ್ಕಾಗಿ ಸಣ್ಣ-ಸಣ್ಣ ಕಾಗದಗಳ ಧ್ವಜಗಳನ್ನು ಮಾರಾಟ ಮಾಡುವುದು ಒಂದು ಹೊಸ ಫ್ಯಾಶನ್ ಆಗಿದೆ. ಇದು ಅಯೋಗ್ಯ ರೂಢಿಯಾಗಿದೆ. ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಬೇರೆ ಬೇರೆ ಆಕಾರದ ಕಾಗದದ ಧ್ವಜಗಳನ್ನು ಪೇಟೆಗಳಲ್ಲಿ ಬಹಿರಂಗವಾಗಿ ಮಾರಾಟ ಮಾಡುತ್ತಾರೆ. ಸಣ್ಣ ಮಕ್ಕಳ ಜೊತೆಗೆ ಅನೇಕ ವ್ಯಕ್ತಿಗಳು ರಾಷ್ಟ್ರಭಕ್ತಿಯಿಂದ ಮತ್ತು ಉತ್ಸಾಹದಿಂದ ಕಾಗದದ ಚಿಕ್ಕ ಧ್ವಜಗಳನ್ನು ಖರೀದಿಸುತ್ತಾರೆ. ಈ ಧ್ವಜಗಳನ್ನು ಖರೀದಿಸಿ, ಉಪಯೋಗಿಸಿದ ಬಳಿಕ ತಮಗೆ ತೋಚಿದ ಕಡೆಗಳಲ್ಲಿ ಅಸ್ತವ್ಯಸ್ತವಾಗಿ ನಿಯಮಗಳನ್ನು ಕಡೆಗಣಿಸಿ ಬಿಸಾಡುತ್ತಾರೆ. ಕೇವಲ ಆಕರ್ಷಣೆ ಎಂದು ಖರೀದಿಸಿದ ಈ ಧ್ವಜಗಳು ಸ್ವಲ್ಪ ದಿನಗಳ ನಂತರ ಹರಿದು ರಸ್ತೆಯ ಮೇಲೆ, ಕಸದ ತೊಟ್ಟಿಯಲ್ಲಿ ಹಾಗೂ ಇತರ ಕಡೆಗಳಲ್ಲಿ ಬಿದ್ದಿರುತ್ತವೆ.ಅನೇಕ ಸಲ ಈ ಧ್ವಜಗಳನ್ನು ಕಸದ ಜೊತೆಗೆ ಸುಟ್ಟು ಹಾಕುತ್ತಾರೆ. ಇದನ್ನೆಲ ಮಾಡುವಾಗ ನಾವು ರಾಷ್ಟ್ರಧ್ವಜದ ಅರ್ಥಾತ್ ದೇಶದ ಅವಮಾನವನ್ನು ಮಾಡುತ್ತಿದ್ದೇವೆ ಎನ್ನುವುದನ್ನು ನಾಗರಿಕರು ಮರೆಯುತ್ತಿದ್ದಾರೆ.
ನಮ್ಮ ರಾಷ್ಟ್ರಧ್ವಜದ ಗೌರವವನ್ನು ನಾವೇ ಕಾಪಾಡಬೇಕು, ದೇಶದ ಗೌರವವನ್ನು ಉಳಿಸಬೇಕು. ಧ್ವಜದ, ರಾಷ್ಟ್ರದ ಅವಮಾನ ಆಗಬಾರದೆಂದು ಬ್ರಿಟಿಷರು ಕೊಟ್ಟ ತೊಂದರೆಗಳನ್ನು ಲಕ್ಷಾಂತರ ದೇಶಭಕ್ತರು ಸಹಿಸಿದ್ದರು. ರಾಷ್ಟ್ರಧ್ವಜಕ್ಕೆ ವಂದಿಸಿ ನಮ್ಮಲ್ಲಿ ದೇಶಪ್ರೇಮದ ಜ್ಯೋತಿಯನ್ನು ಪ್ರಜ್ವಲಿಸಬೇಕು.

ಮಕ್ಕಳಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಅಭಿಮಾನವನ್ನು ಹೇಗೆ ನಿರ್ಮಾಣ ಮಾಡುವಿರಿ ?

ಸದ್ಯದ ಸ್ಥಿತಿ
ನಾವು ಸದ್ಯ ಮಕ್ಕಳ ಅವಲೋಕನವನ್ನು ಮಾಡಿದಾಗ ಗಮನಕ್ಕೆ ಬರುವುದೆಂದರೆ, ಮಕ್ಕಳಲ್ಲಿ ರಾಷ್ಟ್ರಾಭಿಮಾನ ಮತ್ತು ಧರ್ಮಾಭಿಮಾನದ ಅಭಾವವು ದೊಡ್ಡ ಪ್ರಮಾಣದಲ್ಲಿ ಅರಿವಿಗೆ ಬರುತ್ತದೆ. ಒಂದು ವೇಳೆ ಈ ಸ್ಥಿತಿಯು ಹೀಗೆಯೇ ಉಳಿದರೆ, ರಾಷ್ಟ್ರದ ವಿನಾಶವಾಗಲು ಸಮಯ ತಗಲಲಾರದು. ಆದುದರಿಂದ ನಾವು ಮಕ್ಕಳಲ್ಲಿ ರಾಷ್ಟ್ರಾಭಿಮಾನ ನಿರ್ಮಾಣವಾಗುವ ಸಲುವಾಗಿ ಪ್ರಯತ್ನ ಮಾಡಲೇಬೇಕು.

ರಾಷ್ಟ್ರದಲ್ಲಿನ ನಾಗರಿಕರ ಒಮ್ಮತ ಹಾಗೂ ಸಂಘಟಿತತೆಯಿಂದಾಗಿ ರಾಷ್ಟ್ರದ ಅಖಂಡತ್ವವು ಸ್ಥಿರವಾಗಿರುತ್ತದೆ. ಇಂದಿನ ವಿದ್ಯಾರ್ಥಿಗಳೇ ನಾಳೆಯ ಭಾರತದ ಭಾವೀ ನಾಗರಿಕರಾಗಿರುತ್ತಾರೆ. ಆದುದರಿಂದ ವಿದ್ಯಾರ್ಥಿಗಳಲ್ಲಿ ಚಿಕ್ಕಂದಿನಿಂದಲೇ ಪ್ರಖರ ರಾಷ್ಟ್ರಾಭಿಮಾನವನ್ನು ನಿರ್ಮಾಣ ಮಾಡುವುದು ಅತ್ಯಂತ ಆವಶ್ಯಕವಾಗಿರುತ್ತದೆ. ಅನ್ಯಥಾ ದೊಡ್ಡವರಾದ ಮೇಲೆ ಸಮಾಜಕ್ಕಾಗಿ ಎಂದರೆ ಪರ್ಯಾಯವಾಗಿ ರಾಷ್ಟ್ರಕ್ಕಾಗಿ ತ್ಯಾಗ ಮಾಡುವ ವೃತ್ತಿಯು ಅವರಲ್ಲಿ ನಿರ್ಮಾಣವಾಗಲು ಸಾಧ್ಯವಿಲ್ಲ. ಇಸ್ರೇಲಿನ ಎಷ್ಟೊಂದು ಪೀಳಿಗೆಯ ನಂತರವೂ ಸಹ ಜಗತ್ತಿನಾದ್ಯಂತ ಪಸರಿಸಿದ ನಾಗರಿಕರು ಒಂದೆಡೆ ಬರಲು ಸಾಧ್ಯವಾಯಿತು, ಅದರ ಹಿಂದೆ ಮುಂದಿನ ಪೀಳಿಗೆಯಲ್ಲಿ ಅವರು ನಿರ್ಮಾಣ ಮಾಡಿದ ಪ್ರಖರ ರಾಷ್ಟ್ರವಾದವೇ ಕಾರಣವಾಗಿದೆ.

ಮಕ್ಕಳಿಗೆ ಯೋಗ್ಯ ದೃಷ್ಟಿಕೋನವನ್ನು ನೀಡುವುದು (ಮಾನಸಿಕ/ಬೌದ್ಧಿಕ ಸ್ತರ)
೧. ಇತಿಹಾಸ ಈ ವಿಷಯವನ್ನು ರಾಷ್ಟ್ರಪ್ರೇಮ ನಿರ್ಮಾಣವಾಗಲು ಕಲಿಸುವುದು ಆವಶ್ಯಕವಾಗಿರುವುದು

ನಿಜವಾಗಿ ಹೇಳಬೇಕೆಂದರೆ ಇತಿಹಾಸ ವಿಷಯವನ್ನು ಕಲಿತು ಮಕ್ಕಳಲ್ಲಿ ರಾಷ್ಟ್ರಾಭಿಮಾನವು ನಿರ್ಮಾಣವಾಗಬೇಕಿತ್ತು, ಆದರೆ ನಮ್ಮ ಶಿಕ್ಷಣವು ಅಂಕಾಧಿಷ್ಠಿತವಾಗಿದೆ. ಪರೀಕ್ಷೆಗಳ ಮೌಲ್ಯಮಾಪನವನ್ನು ಅಂಕಗಳ ಮೇಲೆ ಮಾಡಲಾಗುತ್ತದೆ. ಅದರಿಂದಾಗಿ ಮಕ್ಕಳ ಗಮನವು ಅಂಕಗಳನ್ನು ಹೆಚ್ಚಿಸಿಕೊಳ್ಳುವತ್ತ ಇರುತ್ತದೆ. ಸದ್ಯ ಮಕ್ಕಳು ಎಲ್ಲ ವಿಷಯಗಳಂತೆ "ಇತಿಹಾಸ" ಈ ವಿಷಯವನ್ನು ಅಂಕಗಳಿಗಾಗಿ ಕಲಿಯುತ್ತಾರೆ, ಉದಾ. ಭಗತಸಿಂಗ ಈ ವಿಷಯವು ಹತ್ತು ಅಂಕಗಳಿಗಾಗಿ. ಮಕ್ಕಳ ಇದರ ಹಿಂದಿನ ದೃಷ್ಟಿಕೋನವನ್ನು ನಾವೇ ಬದಲಾಯಿಸಬೇಕು. ಇತಿಹಾಸವನ್ನು ಅಂಕಗಳಿಗಾಗಿ ಕಲಿಯದೇ ಅದು ಅವರಲ್ಲಿ ರಾಷ್ಟ್ರಪ್ರೇಮವನ್ನು ನಿರ್ಮಾಣ ಮಾಡಬೇಕು, ಎನ್ನುವ ರೀತಿಯಲ್ಲಿ ಅವರಿಗೆ ಕಲಿಸಬೇಕು ಹಾಗೂ ಇದೇ ದೃಷ್ಟಿಕೋನವನ್ನು ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಕೊಡಬೇಕು. ಒಂದು ವೇಳೆ ಭಾವೀ ಪೀಳಿಗೆಯು ರಾಷ್ಟ್ರಪ್ರೇಮಿಯಾಗದಿದ್ದಲ್ಲಿ, ರಾಷ್ಟ್ರದ, ಪರೋಕ್ಷವಾಗಿ ನಮ್ಮ ವಿನಾಶವು ಖಚಿತವಾಗಿದೆ. "ರಾಷ್ಟ್ರ ಉಳಿದರೆ ಸಮಾಜ ಉಳಿದೀತು ಮತ್ತು ಸಮಾಜ ಉಳಿದರೆ ನಾನು ಉಳಿಯುವೆನು", ಎನ್ನುವ ದೃಷ್ಟಿಕೋನವನ್ನೇ ಪಾಲಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ಬಿಂಬಿಸಬೇಕು.

೨. ಇತಿಹಾಸದಲ್ಲಿನ ಚಿಕ್ಕ ಚಿಕ್ಕ ಉದಾಹರಣೆಗಳನ್ನು ನೀಡಿ ಮಕ್ಕಳಲ್ಲಿ ರಾಷ್ಟ್ರಪ್ರೇಮವನ್ನು ನಿರ್ಮಾಣ ಮಾಡಿರಿ!
ಇತಿಹಾಸದಲ್ಲಿನ ಪ್ರಸಂಗಗಳನ್ನು ಕಲಿಸುವಾಗ ಮಕ್ಕಳಲ್ಲಿ ರಾಷ್ಟ್ರಪ್ರೇಮವು ನಿರ್ಮಾಣವಾಗುತ್ತದೆಯೆನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಮಕ್ಕಳ ವರದಿಯನ್ನು ತೆಗೆದುಕೊಳ್ಳಬೇಕು, ಉದಾ. "ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ಪ್ರಾಣದ ಆಹುತಿಯನ್ನು ನೀಡಿದರು. ಅಂತಹ ಸಂದರ್ಭದಲ್ಲಿ ಧ್ವಜವು ಸ್ವಾತಂತ್ರ್ಯದಿನದಂದು ರಸ್ತೆಯ ಮೇಲೆ ಬಿದ್ದಿರುವುದು ಕಂಡಾಗ ನಿನಗೆ ಏನೆನ್ನಿಸುವುದು ?" ಎನ್ನುವಂತಹ ಕೃತಿಯ ಸ್ತರದಲ್ಲಿನ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಬೇಕು. ಇದರ ಮೂಲಕ "ಧ್ವಜದ ಅಪಮಾನವನ್ನು ತಡೆಯಬೇಕು", ಎನ್ನುವುದನ್ನು ನಾವು ಮಕ್ಕಳಿಗೆ ಹೇಳಬೇಕು. ರಾಷ್ಟ್ರಪ್ರೇಮವನ್ನು ನಿರ್ಮಾಣ ಮಾಡುವಂತಹ ಚಲನಚಿತ್ರಗಳನ್ನು ಮಕ್ಕಳಿಗೆ ತೋರಿಸಬೇಕು.

೩. ರಾಷ್ಟ್ರಕ್ಕಾಗಿ ಬಲಿದಾನವನ್ನು ನೀಡಿದವರ ಬಗ್ಗೆ ಕೃತಜ್ಞತಾಭಾವವನ್ನು ನಿರ್ಮಾಣ ಮಾಡಿರಿ!
ಸ್ವಾತಂತ್ರ್ಯಕ್ಕಾಗಿ ಸಂಪೂರ್ಣ ಆಯುಷ್ಯವನ್ನು ಬಲಿಕೊಟ್ಟ, ಕಾರಾಗೃಹದಲ್ಲಿ ಅತಿಶಯ ಕಷ್ಟಗಳನ್ನು ಭೋಗಿಸುವ ಸ್ವಾತಂತ್ರ್ಯಸೈನಿಕರು ಮತ್ತು ಕ್ರಾಂತಿಕಾರರು ಹಾಗೆಯೇ ಇಂದಿಗೂ ದೇಶದ ಸೀಮೆಯ ರಕ್ಷಣೆಯನ್ನು ಮಾಡುವುದಕ್ಕಾಗಿ ಪೂರ್ಣ ಆಯುಷ್ಯವನ್ನು ಪಣಕ್ಕೊಡ್ಡಿದ ಸೈನಿಕರ ಬಗ್ಗೆ ಮಕ್ಕಳ ಮನಸ್ಸಿನಲ್ಲಿ ಆದರದ ಹಾಗೂ ಕೃತಜ್ಞತೆಯ ಭಾವವನ್ನು ನಿರ್ಮಾಣ ಮಾಡುವುದು ಆವಶ್ಯಕವಾಗಿದೆ.

೪. ರಾಷ್ಟ್ರಕ್ಕಾಗಿ ತ್ಯಾಗವನ್ನು ಮಾಡುವುದಕ್ಕೆ ತಯಾರಿಯು ಧಾರ್ಮಿಕ ಅಧಿಷ್ಠಾನದಿಂದಲೇ ಸಾಧ್ಯವಾಗುತ್ತದೆ!
ವೈಯಕ್ತಿಕ ಸುಖಕ್ಕಿಂತ ರಾಷ್ಟ್ರಕ್ಕಾಗಿ ತ್ಯಾಗ ಮಾಡುವುದೇ ಅಧಿಕ ಯೋಗ್ಯ ವಿಷಯವಾಗಿದೆ, ಎನ್ನುವ ಸಂಕಲ್ಪನೆಯು ಮಕ್ಕಳ ಮನಸ್ಸಿನಲ್ಲಿ ಬಿಂಬಿತವಾಗುವುದು ಆವಶ್ಯಕವಾಗಿದೆ. "ತ್ಯಾಗ" ಈ ವಿಷಯವು ಕೈಗೂಡುವುದಕ್ಕಾಗಿ ಕೇವಲ ರಾಷ್ಟ್ರಪ್ರೇಮವು ಸಾಕಾಗುವುದಿಲ್ಲ. ಅದರಿಂದಾಗಿ ಸ್ವಾರ್ಥ ಮತ್ತು ಅಹಂಭಾವವು ಬೆಳೆಯುವ ಸಾಧ್ಯತೆಯಿರುತ್ತದೆ. ಆದರೆ ಧರ್ಮದ ಅಧಿಷ್ಠಾನವಿದ್ದರೆ, ನಿಸ್ವಾರ್ಥತೆ ಮತ್ತು ತ್ಯಾಗದ ಭಾವನೆಯು ನಿರ್ಮಾಣವಾಗಲು ಸಾಧ್ಯವಾಗುವುದು. ಇದಕ್ಕಾಗಿ ನಿಜವಾದ ರಾಷ್ಟ್ರಪ್ರೇಮವು ನಿರ್ಮಾಣವಾಗುವುದಕ್ಕಾಗಿ ಧರ್ಮದ ಅಧಿಷ್ಠಾನವಿರುವುದು ಆವಶ್ಯಕವಾಗಿದೆ.


ಮಕ್ಕಳಿಗೆ ಶಿಸ್ತನ್ನು ಹೇಗೆ ಕಲಿಸಬೇಕು ?




ಶಿಸ್ತು ಮತ್ತು ಶಿಕ್ಷೆ ಈ ಎರಡೂ ಶಬ್ದಗಳು ಶಿಕ್ಷಣ ಶಬ್ದದಿಂದ ನಿರ್ಮಾಣವಾಗಿವೆ. ಶಿಕ್ಷಣದಿಂದ ಒಳ್ಳೆಯ ನಡತೆಯನ್ನು ಜಾರಿಯಲ್ಲಿ ತರುವುದೇ ಶಿಸ್ತು. ಇದಕ್ಕಾಗಿ ಶಿಕ್ಷೆ ಯಾತಕ್ಕಾಗಿ, ಯಾವ ತಪ್ಪಿಗಾಗಿ ಹಾಗೂ ಯಾವ ತಪ್ಪು ವರ್ತನೆಗಾಗಿ ಇದೆ, ಎನ್ನುವುದನ್ನು ತಿಳಿಸಿಯೇ ಶಿಕ್ಷೆಯನ್ನು ನೀಡಬೇಕು.
ಶಿಸ್ತನ್ನು ಕಲಿಸುವ ಸಂದರ್ಭದಲ್ಲಿ ಮಹತ್ವದ ಸೂಚನೆಗಳು
೧. ಒಳ್ಳೆಯ ವರ್ತನೆಯ ಸ್ತುತಿ ಮತ್ತು ತಪ್ಪುವರ್ತನೆಗೆ ಶಿಕ್ಷೆ. ಮಕ್ಕಳಿಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಸಿಕ್ಕಿದರೆ ಅಥವಾ ಬಹುಮಾನ ಸಿಕ್ಕಿದರೆ ಅದರ ಸ್ತುತಿಯನ್ನು ಮಾಡಬೇಕು. ಅವರ ಪ್ರಶಂಸೆಯನ್ನು ಮಾಡಬೇಕು ಎಂದರೆ ಅವರಿಗೆ ಇನ್ನೂ ಒಳ್ಳೆಯದಾಗಿ ವರ್ತಿಸುವುದಕ್ಕೆ ಪ್ರೋತ್ಸಾಹನೆಯು ಸಿಗುವುದು. ಅವರ ತಪ್ಪುನಡವಳಿಕೆಗೆ ಕೋಪವನ್ನು ವ್ಯಕ್ತ ಮಾಡಬೇಕು ಮತ್ತು ಅವಶ್ಯವೆನಿಸಿದಲ್ಲಿ ಶಿಕ್ಷೆಯನ್ನೂ ನೀಡಬೇಕು.
೨. ಆಜ್ಞೆಯನ್ನು ಮಾಡದೇ ವಿನಂತಿಯನ್ನು ಮಾಡಬೇಕು. "ನೀರನ್ನು ತಾ", ಎಂದು ಹೇಳದೇ "ರಾಜಾ ನನಗೊಂದು ಗ್ಲಾಸು ನೀರನ್ನು ತಂದುಕೊಡಬಹುದಾ ?", ಎಂದು ವಿನಂತಿಯನ್ನು ಮಾಡಬೇಕು.
೩. ಮನೆಯಲ್ಲಿನ ಸದಸ್ಯರ ಒಮ್ಮತ-ಮಗುವಿಗೆ ಶಿಸ್ತನ್ನು ಹಚ್ಚುವ ಮೊದಲು ಮಗುವಿನಿಂದ ಯಾವ ರೀತಿಯ ನಡವಳಿಕೆಯ ಅಪೇಕ್ಷೆಯಿದೆಯೆನ್ನುವುದರ ವಿಚಾರವನ್ನು ಮಾಡಿ ನಮ್ಮ ಭೂಮಿಕೆಯನ್ನು ನಿಶ್ಚಿತಗೊಳಿಸಬೇಕು ಮತ್ತು ಎರಡು ಮತಗಳಾಗಲು ಬಿಡಬಾರದು. ತಾಯಿ-ತಂದೆಯ ಹಾಗೂ ಮನೆಯಲ್ಲಿನ ಇತರ ಸದಸ್ಯರ ಒಮ್ಮತವು ಮಗುವಿಗೆ ಶಿಸ್ತನ್ನು ಕಲಿಸುವ ಕಾರ್ಯದಲ್ಲಿ ಅತ್ಯಂತ ಆವಶ್ಯಕವಾಗಿರುತ್ತದೆ. ಕಿಟಕಿಯ ಗಾಜನ್ನು ಹಿಡಿದು ಕಿಟಕಿಯ ಮೇಲೆ ಎತ್ತರಕ್ಕೆ ಏರುವ ಬಗ್ಗೆ ತಂದೆಯ ಪ್ರಶಂಸೆ ಮತ್ತು ಅದೇ ಕೃತ್ಯಕ್ಕಾಗಿ ತಾಯಿಯು ಕೋಪಗೊಳ್ಳುವುದು, ಹೀಗೆ ಆಗಬಾರದು. ಶಿಕ್ಷೆಯನ್ನು ಯಾವಾಗ ಕೊಡಬೇಕು ಎನ್ನುವುದರ ಬಗ್ಗೆ ಮತಭೇದವನ್ನು ಪಾಲಕರು ಮೊದಲೇ ದೂರಗೊಳಿಸಿಕೊಂಡಿರಬೇಕು. ಮಕ್ಕಳೆದುರು ಬಿಡಿಸಬಾರದು.
೪. ತಪ್ಪು ಘಟಿಸಿದಲ್ಲಿ ತಕ್ಷಣ ಶಿಕ್ಷೆಯನ್ನು ಕೊಡಬೇಕು. "ಇರು, ಸಂಜೆಗೆ ತಂದೆಯು ಬರಲಿ, ನಂತರ ನೋಡುತ್ತೇನೆ" ಎನ್ನುವುದು ತಪ್ಪು ಶಿಕ್ಷೆಯಾಗಿದೆ. ಅದರಿಂದಾಗಿ ತಂದೆಯು ಬರುವವರೆಗೆ ಮಗುವು ಶಿಕ್ಷೆಯ ಚಿಂತೆಯಲ್ಲಿರುತ್ತದೆ.
ಮಗುವು ಮಾಡಿದ ತಪ್ಪಿಗೆ ತುಲನೆಯಲ್ಲಿ ಶಿಕ್ಷೆಯು ಹೊಂದಾಣಿಕೆಯಾಗುವಂತಿರಬೇಕು. ನಮ್ಮ ಶಾಲೆಯ ಪ್ರಾಚಾರ್ಯ ಹಾಗೂ ಗುರುವರ್ಯರು ಅತಿಶಯ ಸಾತ್ತ್ವಿಕ ಮತ್ತು ಶಾಂತ ಗೃಹಸ್ಥರು. ಅವರ ಬಳಿ ಯಾವುದೇ ವಿದ್ಯಾರ್ಥಿಯು ಭಯದಿಂದ ಹೋಗದೇ ಆದರದಿಂದ ಮತ್ತು ಪ್ರೇಮದಿಂದ ಹೋಗುತ್ತಿದ್ದನು. ಒಂದು ದಿನ ನಾನು ಅವರಿಗೆ ಭೇಟಿಯಾಗಲು ಹೋದಾಗ ಒಬ್ಬ ೧೦ ನೇ ತರಗತಿಯ ಹುಡುಗನಿಗೆ ಛಡಿಯಿಂದ (ಕೋಲಿನಿಂದ) ಬಹಳ ಹೊಡೆಯುತ್ತಿದ್ದರು. ಕಾಳೆ ಗುರೂಜಿಯವರ ರೌದ್ರಾವತಾರವನ್ನು ನೋಡಿ ನಾನೇ ಬೆಚ್ಚಿಬಿದ್ದೆ. ನಂತರ ಅವರನ್ನು ಭೇಟಿಯಾದಾಗ ಅವರು ಹೇಳಿದರು, "ನಿನ್ನೆ ಈ ವಿದ್ಯಾರ್ಥಿಯು ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ನನ್ನ ಬಳಿಯಿಂದ ೫೦ ರೂಪಾಯಿಗಳನ್ನು ತೆಗೆದುಕೊಂಡು ಹೋದನು. ನಾನು ಅವನಿಗೆ ನೀಡಿದೆ. ಇಂದು ಬೆಳಿಗ್ಗೆ ದೇವಸ್ಥಾನದಲ್ಲಿ ಅವನ ತಾಯಿಯು ಸಿಕ್ಕಳು. ಈ ಹುಡುಗನಿಗೆ ಜನ್ಮವಿಡೀ ನೆನಪಿನಲ್ಲಿರಬೇಕು ಅಂತಹ ಶಿಕ್ಷೆಯೇ ಯೋಗ್ಯವಾಗಿದೆ. ಇಲ್ಲವಾದರೆ ಅವನು ಪಕ್ಕಾ ಮೋಸಗಾರನಾಗುತ್ತಿದ್ದ.
ಯೋಗ್ಯ ಮತ್ತು ಅಯೋಗ್ಯ ಶಿಕ್ಷೆ
ಮಗುವಿನೊಂದಿಗೆ ಮಾತನಾಡದಿರುವುದು ಅಥವಾ ಮಗುವಿಗೆ ದಿನವಿಡೀ ಉಪವಾಸ, ಈ ಶಿಕ್ಷೆಗಳು ಯೋಗ್ಯವಾದುವಲ್ಲ. ಕಾರಣ ಸಂಜೆಯ ವೇಳೆಗೆ ಅದೇ ತಾಯಿಯು ಊಟಕ್ಕಾಗಿ ಮಗುವಿಗೆ ಮನವೊಲಿಸುವಳು. ಸಂಜೆಯ ವೇಳೆಗೆ ಮಗುವಿಗೆ ಆಟಕ್ಕಾಗಿ ಮನೆಯ ಹೊರಗೆ ಹೋಗಗೊಡದಿರುವುದು ಅಥವಾ ಅವನಿಗೆ ದೂರಚಿತ್ರವಾಹಿನಿಯನ್ನು ನೋಡಕೊಡದಿರುವುದು ಇವು ಯೋಗ್ಯ ಶಿಕ್ಷೆಗಳಾಗಿವೆ.
ಎಳೆಯ ಮನಸ್ಸಿನ ಮೇಲೆ ಸಂಸ್ಕಾರವನ್ನು ಮಾಡಿರಿ !
"ಸಾಧನೆಯ ಮೂಲ ತಳಹದಿಯೆಂದರೆ ಶಿಸ್ತು. ಪ್ರತಿಯೊಂದು ಕೃತಿಗೂ ಒಂದು ವೇಳೆ ಶಿಸ್ತು, ನಿಯಮಗಳನ್ನು ಹಾಕಿಕೊಳ್ಳದಿದ್ದರೆ, ಆ ಕೃತಿಗಳು ಅಪೂರ್ಣವಾಗುತ್ತವೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಶಿಸ್ತಿನ ಕಟ್ಟುನಿಟ್ಟಿನ ಪಾಲನೆಯನ್ನು ಮಾಡಿದರೆ ಅಧ್ಯಾತ್ಮದಲ್ಲಿನ ಪ್ರಗತಿಯು ಶೀಘ್ರವಾಗಿ ಆಗುತ್ತದೆ. ಅದಕ್ಕಾಗಿ ಚಿಕ್ಕಂದಿನಿಂದಲೇ ಶಿಸ್ತಿನ ಸಂಸ್ಕಾರವನ್ನು ಎಳೆಯ ಮನಸ್ಸಿನ ಮೇಲೆ ಬಿಂಬಿಸಬೇಕು."
ಮಕ್ಕಳ ಮೇಲೆ ಸುಸಂಸ್ಕಾರವಾಗುವುದಕ್ಕಾಗಿ ಸಾಧನೆಯ ಬೆಂಬಲವನ್ನು ನೀಡುವುದು
ಮಕ್ಕಳು ಸದ್ಗುಣಿಗಳಾಗಲು ಎರಡು ವಿಷಯಗಳು ಆವಶ್ಯಕವಿರುತ್ತವೆ. ಮೊದಲನೆಯದೆಂದರೆ ಪಾಲಕರು ಸ್ವತಃ ಸದ್ಗುಣಿಗಳಾಗಿರಬೇಕು ಮತ್ತು ಎರಡನೆಯದೆಂದರೆ ಅವರಿಗೆ ಶಿಸ್ತನ್ನು ಕಲಿಸುವುದರೊಂದಿಗೆ ಅವರಿಗೆ ಭಕ್ತಿಯನ್ನು ಮಾಡಲು ಕಲಿಸಬೇಕು. ಸಾಧನೆಯ ಅಥವಾ ಉಪಾಸನೆಯ ಬೆಂಬಲವಿದ್ದರೆ ಮಕ್ಕಳಲ್ಲಿ ಸದ್ಗುಣಗಳು ತಕ್ಷಣ ಮೈಗೂಡುತ್ತವೆ. ಹಠಮಾರಿ ಅಥವಾ ಕೇಳದಿರುವ ಮಕ್ಕಳನ್ನು ಬದಲಾಯಿಸುವ ಶಕ್ತಿಯು ಭಗವಂತನ ನಾಮದಲ್ಲಿದೆ ಹಾಗೂ ಇದರ ಅನುಭವವನ್ನು ಎಷ್ಟೋ ಜನರು ತೆಗೆದುಕೊಂಡಿದ್ದಾರೆ."
ಭಕ್ತಿಯ ಬೀಜವನ್ನು ಸ್ವಂತದ ಹೃದಯಕಮಲದ ಮೇಲೆ ಬಿತ್ತುವುದರಿಂದ ಆ ಬೀಜವು ಮಕ್ಕಳಲ್ಲಿ ನಿರ್ಮಾಣವಾಗುವುದು
ಈ ಎಲ್ಲ ಸ್ಥಿತಿಯನ್ನು ಬದಲಾಯಿಸಲು ನಮಗೆ ಜೀವನದಲ್ಲಿ ಅಧ್ಯಾತ್ಮದ, ಭಕ್ತಿಯ ಅವಶ್ಯಕತೆಯಿರುತ್ತದೆ. ಮೊದಲು ಪಾಲಕರು ಭಕ್ತಿಯ ಬೀಜವನ್ನು ಸ್ವಂತದ ಹೃದಯಕಮಲದಲ್ಲಿ ಬಿತ್ತಬೇಕು. ಅಂದಾಗಲೇ ಆ ಬೀಜವು ಅವರ ಮಕ್ಕಳಲ್ಲಿ ನಿರ್ಮಾಣವಾಗುವುದು. "ವಾಲ್ಯಾ ಇದ್ದವನು ವಾಲ್ಮೀಕಿಯಾದನು", ಎಂಬ ಕತೆಗಳನ್ನು ನಾವು ಹೇಳುತ್ತೇವೆ, ಆದರೆ ಸ್ವತಃ ಮಾತ್ರ ಸಾಧನೆಯನ್ನು ಮಾಡುವುದಿಲ್ಲ. "ಭಗವಂತನ ನಾಮದಲ್ಲಿಯೇ ಮಕ್ಕಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಕ್ಷಮತೆಯಿರುವ ಅರಿವು ಎಲ್ಲ ಪಾಲಕರಿಗೆ ಆಗಲಿ ಮತು ಎಲ್ಲ ಪಾಲಕರ ಮಾಧ್ಯಮದಿಂದ ಸುಸಂಸ್ಕಾರಿತ ಸದ್ಗುಣಿ ಪೀಳಿಗೆಯು ರಾಷ್ಟ್ರಕ್ಕೆ ದೊರಕಿ ಈಶ್ವರೀ ರಾಜ್ಯವು ಶೀಘ್ರವಾಗಿ ಬರಲಿ", ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ.

೨ ರಿಂದ ೫ ವರ್ಷದವರೆಗಿನ ಮಕ್ಕಳಲ್ಲಿ ಯಾವ ಯಾವ ರೂಢಿಯನ್ನು ಬೆಳೆಸಬೇಕು ?



ಬಾಲಮನಸ್ಸಿನ ಮೇಲೆ ಯಾವ ಸಂಸ್ಕಾರವನ್ನು ಮಾಡಲಾಗುತ್ತದೆಯೋ ಅದಕ್ಕನುಸಾರ ಮುಂದಿನ ಕಾಲದಲ್ಲಿ ಮಕ್ಕಳಿಗೆ ರೂಢಿಯು ಬೆಳೆಯುತ್ತದೆ. ಚಿಕ್ಕವಯಸ್ಸಿನಲ್ಲಿ ಆಗುವ ಸಂಸ್ಕಾರಗಳ ಮೇಲೆಯೇ ಮಕ್ಕಳ ರಚನೆಯು ಅವಲಂಬಿಸಿರುತ್ತದೆ. ಸ್ವಂತದ ಮಕ್ಕಳ ಮೇಲೆ ಯಾವ ಸಂಸ್ಕಾರವನ್ನು ಮಾಡುವುದು, ಎನ್ನುವ ಪ್ರಶ್ನೆಯು ಸರ್ವೇಸಾಮಾನ್ಯವಾಗಿ ಅನೇಕರಲ್ಲಿ ಉದ್ಭವಿಸಬಹುದು. ಅದಕ್ಕಾಗಿ ಮಕ್ಕಳಲ್ಲಿ ಯಾವ ನಡವಳಿಕೆಯನ್ನು ಬೆಳೆಸಬೇಕು ಎನ್ನುವ ವಿಷಯದಲ್ಲಿ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.
ಈ ಗುಂಪಿನ ಮಕ್ಕಳಲ್ಲಿ ಕೆಳಗಿನ ಅಭ್ಯಾಸವನ್ನು ಬೆಳೆಸಬೇಕು ಹಾಗೆಯೇ ಸಂಸ್ಕಾರವನ್ನೂ ಮಾಡಬೇಕು
  • ಊಟದ ಮೊದಲು ಕೈ-ಕಾಲು ಮತ್ತು ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು.
  • ತಾವೇ ಸ್ವತಃ ಊಟವನ್ನು ಮಾಡುವುದು.
  • ಪ್ರತಿಯೊಂದು ಊಟದ ನಂತರ ಅಥವಾ ಏನನ್ನಾದರೂ ತಿಂದ ನಂತರ ಬಾಯಿಯನ್ನು ಮುಕ್ಕಳಿಸುವುದು ಮತ್ತು ಹಲ್ಲುಗಳನ್ನು ಸ್ವಚ್ಛವಾಗಿ ತಿಕ್ಕುವುದು.
  • ಮಲವಿಸರ್ಜನೆಯ ನಂತರ ಸ್ವತಃ ಗುದದ್ವಾರದ ಭಾಗವನ್ನು ಮತ್ತು ಕೈ-ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು.
  • ಸ್ವತಂತ್ರವಾಗಿ ಬೇರೆ ಹಾಸಿಗೆಯ ಮೇಲೆ ಮಲಗುವುದು ಮತ್ತು ಅವಶ್ಯವಿದ್ದಲ್ಲಿ ರಾತ್ರಿಯಲ್ಲಿ ಕಡಿಮೆ ಬೆಳಕಿರುವ ದೀಪದ ಉಪಯೋಗವನ್ನು ಮಾಡುವುದು.
  • ಸೀನಬೇಕಾದರೆ ಮತ್ತು ಕೆಮ್ಮಬೇಕಾದರೆ ಮೂಗು-ಬಾಯಿಯ ಮೇಲೆ ಕರವಸ್ತ್ರವನ್ನಿಟ್ಟುಕೊಳ್ಳುವುದು.
  • "ಧನ್ಯವಾದ" "ನಮಸ್ಕಾರ"ದಂತಹ ಶಬ್ದಗಳ ಉಪಯೋಗವನ್ನು ಮಾಡಿ ಜನರ ಸ್ವಾಗತವನ್ನು ಮಾಡುವುದು.
  • ಆಟವಾಡಿದ ನಂತರ ಸ್ವಂತದ ಆಟಿಕೆಗಳನ್ನು ಕಪಾಟಿನಲ್ಲಿ ವ್ಯವಸ್ಥಿತವಾಗಿ ಜೋಡಿಸಿಡುವುದು.
  • ಶೂರವೀರರ ಕಥೆಗಳನ್ನು ಕೇಳುವುದು.
  • ಸುಭಾಷಿತಗಳು, ನಿತ್ಯಪಾಠಗಳನ್ನು ಬಾಯಿಪಾಠ ಮಾಡಿ ಯೋಗ್ಯವಾದ ಜಾಗಗಳಲ್ಲಿ ಅವುಗಳ ಉಪಯೋಗವನ್ನು ಮಾಡುವುದು.
  • ರಾತ್ರಿ ಮಲಗುವ ಮೊದಲು ಹಾಗೂ ಬೆಳಿಗ್ಗೆ ಎದ್ದ ನಂತರ ದೇವರ ನಾಮಸ್ಮರಣೆಯನ್ನು ಮಾಡುವುದು.
  • ಪ್ರತಿದಿನವೂ ಎಲ್ಲ ಹಿರಿಯರಿಗೆ ಬಗ್ಗಿ ನಮಸ್ಕಾರ ಮಾಡುವುದು.

ಸದ್ಯದ ಶಿಕ್ಷಣ ಪದ್ಧತಿ ಮತ್ತು ಶಿಕ್ಷಕರ ಕರ್ತವ್ಯ

Article Image

ಈಗಿನ ಕಾಲದಲ್ಲಿ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸುವಲ್ಲಿ ಶಿಕ್ಷಕರದ್ದು ಬಹುದೊಡ್ಡ ಪಾತ್ರವಿದೆ. ಶಿಕ್ಷಕರು ಸಾಧನೆಯನ್ನು ಮಾಡುತ್ತಿದ್ದಲ್ಲಿ ಅವರು ಸಹಜವಾಗಿ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸಬಹುದು. ಪ್ರಾಚೀನ ಕಾಲದಲ್ಲಿದ್ದ ಶಿಕ್ಷಣ ಪದ್ಧತಿಯಲ್ಲಿ ಇದನ್ನು ನಾವು ನೋಡಬಹುದಾಗಿತ್ತು, ಆದರೆ ಈಗಿನ ಶಿಕ್ಷಣ ಪದ್ಧತಿಯು ಪಾಶ್ಚಾತ್ಯರ ವಿಚಾರಧಾರೆಯ ಮೇಲೆ ಆಧರಿಸಲಾಗಿದೆ. ಇದನ್ನು ಆಧರಿಸಿ ಶಿಕ್ಷಕರೊಬ್ಬರು ಬರೆದ ಲೇಖನವನ್ನು ಇಲ್ಲಿ ನೀಡುತ್ತಿದ್ದೇವೆ.
೧. ಆಶ್ರಮದಲ್ಲಿನ ಸಾತ್ತ್ವಿಕ ವಾತಾವರಣದ ಲಾಭವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಆಗುವುದು
ಹಿಂದೆ ಭಾರತದಲ್ಲಿ ಗುರುಕುಲ ಶಿಕ್ಷಣ ಪದ್ಧತಿಯಿತ್ತು. ಇದರಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯ ಹೊಣೆ ಶಿಕ್ಷಕರ ಮೇಲಿತ್ತು. ವಿದ್ಯಾರ್ಥಿಗಳು ಗುರುಗಳ ಮನೆಯಲ್ಲಿದ್ದು ವಿದ್ಯಾರ್ಜನೆ ಮಾಡುತ್ತಿದ್ದರು. ’ಆಚಾರ್ಯ ದೇವೋ ಭವ’ ಎಂಬ ಗೌರವವು ವಿದ್ಯಾರ್ಥಿಗಳ ಮನದಲ್ಲಿ ಮೂಡಿರುತ್ತಿತ್ತು. ಆಚಾರ್ಯರು ಸ್ವತಃ ಸಾಧನೆ ಮಾಡುತ್ತಿದ್ದರು ಮತ್ತು ಅದೇ ಸಂಸ್ಕಾರವನ್ನು ಅವರು ಮಕ್ಕಳಲ್ಲಿ ಮೂಡಿಸುತ್ತಿದ್ದರು. ಅದಲ್ಲದೇ ಆಶ್ರಮದಲ್ಲಿನ ಸಾತ್ತ್ವಿಕ ವಾತಾವರಣದ ಲಾಭವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಆಗುತ್ತಿತ್ತು.

೨. ಶಾಲೆಯ ಪದ್ಧತಿಯಲ್ಲಿ ಆದ ಬದಲಾವಣೆಗಳು
ಅ. ಶಾಲೆಗೆ ಹೋದರೆ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಆಗುವುದು ಎಂಬ ಖಾತ್ರಿ ಪಾಲಕರಲ್ಲಿರುವುದು
ಹಿಂದಿನ ಕಾಲದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಿದ್ದರು. ಅವರ ಯೋಗ್ಯ ಆಚಾರ, ವಿಚಾರವು ಮಕ್ಕಳಿಗೆ ಅನುಕರಣೀಯವಾಗಿತ್ತು. ಹಾಗಾಗಿ ಶಾಲೆಗೆ ಹೋದರೆ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಆಗುವುದು ಎಂಬ ಖಾತ್ರಿ ಪಾಲಕರಲ್ಲಿತ್ತು.

ಆ. ’ಸಂಸ್ಕಾರ, ಧರ್ಮಾಚರಣೆ’ ಇವು ಸಮಾಜದಲ್ಲಿ ಲೋಪವಾದಂತೆ ಸಮಾಜದ ಅಧಃಪತನವು ಪ್ರಾರಂಭವಾಯಿತು.
ಶಿಕ್ಷಣ ಪದ್ಧತಿಯಲ್ಲಿ ಪಾಶ್ಚಾತ್ಯರ ಪ್ರಭಾವ ಹೆಚ್ಚಾಗುತ್ತಿಂತೆ ಶಿಕ್ಷಕರಲ್ಲಿ ಬದಲಾವಣೆಯು ಶುರುವಾಯಿತು. ಮುಂದೆ ಆಂಗ್ಲ ಮಾಧ್ಯಮದಲ್ಲಿ ಶಾಲೆಗಳು ಪ್ರಾರಂಭವಾಯಿತು. ಶಿಕ್ಷಕರಿಗೆ ’ಸರ್, ಮೇಡಮ್’ ಎಂದು ಕರೆಸಿಕೊಳ್ಳುವುದರಲ್ಲಿಯೇ ಧನ್ಯತೆ ಎನಿಸಲು ಪ್ರಾರಂಭವಾಯಿತು. ಇದೇ ಸಂಸ್ಕಾರವು ಮಕ್ಕಳಲ್ಲಿ ಮೂಡಲು ಪ್ರಾರಂಭವಾಯಿತು. ’ಸಂಸ್ಕಾರ, ಧರ್ಮಾಚರಣೆ’ ಇವು ಸಮಾಜದಲ್ಲಿ ಲೋಪವಾದಂತೆ ಸಮಾಜದ ಅಧಃಪತನವು ಪ್ರಾರಂಭವಾಯಿತು.

೩. ಇತರ ಧರ್ಮೀಯರ ಶಿಕ್ಷಣ ಪದ್ಧತಿ
ಇತರ ಧರ್ಮೀಯರಲ್ಲಿ ಶಾಲೆಯ ಶಿಕ್ಷಣದ ಜೊತೆ ಧರ್ಮದ ಶಿಕ್ಷಣವನ್ನು ನೀಡಲು ವ್ಯವಸ್ಥೆ ಇರುತ್ತದೆ. ಕೇವಲ ಹಿಂದೂ ಮಕ್ಕಳಲ್ಲಿ ಈ ರೀತಿಯ ಶಿಕ್ಷಣವು ಸಿಗುವುದಿಲ್ಲ.

೪. ಸಮಾಜದ ಸ್ಥಿತಿ
ಈಗಿನ ವ್ಯಸ್ತ ಜೀವನ ಶೈಲಿಯಲ್ಲಿ ಮಕ್ಕಳು ಸಂಸ್ಕಾರಯುತರಾಗದಿರಲು ಅನೇಕ ಕಾರಣಗಳಿವೆ. ಈಗಿನ ವಿಭಕ್ತ ಕುಟುಂಬಗಳಿಂದಾಗಿ ಮನೆಯಲ್ಲಿ ಸಂಸ್ಕಾರವನ್ನು ನೀಡಲು ಅಜ್ಜ, ಅಜ್ಜಿ  ಇರುವುದಿಲ್ಲ. ಹಾಗಾಗಿ ಚಿಕ್ಕ ಮಕ್ಕಳನ್ನು ಸಾಕುವ ಮನೆಗಳಿಗೆ ಕಳಿಸಲಾಗುತ್ತಿದೆ. ಇಲ್ಲವಾದರೆ ಮನೆಯಲ್ಲಿ ಕುಳಿತು ದೂರದರ್ಶನ ವೀಕ್ಷಿಸುತ್ತಾ ಸಮಯ ವ್ಯರ್ಥ ಮಾಡಲಾಗುತ್ತಿದೆ. ಹಾಗಾಗಿ ಮಕ್ಕಳಿಗೆ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂದು ಹೇಳುವವರೇ ಇಲ್ಲವಾಗಿದೆ.

೫. ರಾಜಕೀಯ ಪರಿಸ್ಥಿತಿ
ಹಿಂದಿನ ಕಾಲದಲ್ಲಿ ರಾಜರೂ ಸಹ ಧರ್ಮಾಚರಣೆ ಮಾಡುತ್ತಿದ್ದರು ಮತ್ತು ಅವರು ಋಷಿಮುನಿಗಳ ಮಾರ್ಗದರ್ಶನದಂತೆ ರಾಜ್ಯಭಾರ ಮಾಡುತ್ತಿದ್ದರು. ಆದರೆ ಈಗಿನ ರಾಜಕಾರಣಿಗಳು ಧರ್ಮಾಚರಣೆ ಮಾಡದಿರುವ ಕಾರಣ ಹಿಂದೂ ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆಯನ್ನು ಮಾಡಲು ಅವರು ಅಸಮರ್ಥರಿದ್ದಾರೆ. ಶಿಕ್ಷಣ ಸಂಸ್ಥೆಗಳು ಸಹ ಇದೇ ರಾಜಕಾರಣಿಗಳದ್ದು ಆಗಿರುವುದರಿಂದ ಸಂಸ್ಕಾರಯುತ ಮಕ್ಕಳಿಗೆ ಇರಲಿ ಚೆನ್ನಾಗಿ ಓದುವ ಮಕ್ಕಳಿಗೆ ಸಹ ಇಲ್ಲಿ ಜಾಗ ಸಿಗುವುದು ಕಷ್ಟವಿದೆ.

೬. ಈಗಿನ ಶಿಕ್ಷಣ ಪದ್ಧತಿ
ಪ್ರಚಲಿತ ಶಿಕ್ಷಣ ಪದ್ಧತಿಯು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಕುಗ್ಗಿಸುತ್ತಿದೆ. ಮಕ್ಕಳಿಗೆ ಶಿಕ್ಷಣದ ಆನಂದಕ್ಕಿಂತ ಪರೀಕ್ಷೆಯ ಭಯವೇ ಹೆಚ್ಚಾಗಿದೆ. ಈಗಿನ ಶಿಕ್ಷಣ ಪದ್ಧತಿಯಿಂದ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸಲು ಸಾಧ್ಯವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕಾಗಿದ್ದಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದಿದೆ. ಶಿಕ್ಷಕರು ಸಾಧಕರಾಗಿದ್ದಲ್ಲಿ, ಮಕ್ಕಳಿಗೆ ಅವರು ಒಳ್ಳೆಯ ಸಂಸ್ಕಾರವನ್ನು ನೀಡಬಹುದು. ಹಾಗಿದ್ದರೆ ಶಿಕ್ಷಕರು ಸಾಧಕರಾಗಲು ಏನು ಮಾಡಬೇಕು?

ಅ. ದೈನಂದಿನ ಜೀವನದಲ್ಲಿ ನಡೆಯುವ ಪ್ರತಿಯೊಂದು ಪ್ರಸಂಗದ ಕಾರಣವನ್ನು ಹುಡುಕಿ ಅದಕ್ಕೆ ಉಪಾಯವನ್ನು ಹೇಳುವುದು ಎಂದರೆ ಸಾಧನೆ ಕಲಿಸುವುದು
ಪಠ್ಯಕ್ರಮದಲ್ಲಿರುವ ತಾತ್ತ್ವಿಕ ಮಾಹಿತಿಯನ್ನು ಕಲಿತು ಮಕ್ಕಳಿಗೆ ಆನಂದ ಸಿಗುವುದಿಲ್ಲ. ಅದಕ್ಕಾಗಿ ಪಠ್ಯಕ್ರಮದ ಹೊರತಾಗಿ ಪ್ರತಿಯೊಂದು ಪ್ರಸಂಗದ ಅಧ್ಯಾತ್ಮೀಕರಣ ಮಾಡಬೇಕು. ದೈನಂದಿನ ಜೀವನದಲ್ಲಿ ನಡೆಯುವ ಪ್ರತಿಯೊಂದು ಪ್ರಸಂಗದ ಕಾರಣವನ್ನು ಹುಡುಕಿ ಅದಕ್ಕೆ ಉಪಾಯವನ್ನು ಹೇಳುವುದು ಎಂದರೆ ಸಾಧನೆ ಕಲಿಸುವುದು

ಆ. ಧರ್ಮಾಚರಣೆ ಮತ್ತು ಸಾಧನೆ
ಸ್ವತಃ ತಾವು ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಿ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಬೇಕು. ವಿದ್ಯಾರ್ಥಿಗಳಿಗೆ ಸಾಧನೆಯನ್ನು ಸುಲಭವಾಗಿ ಹೇಳಲು ಶಿಕ್ಷಕರಿಗೆ ಬರಬೇಕು.

ಇ. ಅಭ್ಯಾಸುವೃತ್ತಿ
ಸತತವಾಗಿ ಸತ್ಯವನ್ನು ಅರಿಯುವ ಜಿಜ್ಞಾಸು ವೃತ್ತಿ ಇರಬೇಕು.

ಉ. ಕೃತಿ
ಕೇವಲ ಉಪದೇಶ ಮಾಡದೆ ಕೃತಿಯಿಂದ ಕಲಿಸಬೇಕು.

೭. ಸಂಸ್ಕಾರ ಮತ್ತು ಧರ್ಮಾಚರಣೆಯನ್ನು ಕಲಿಸಲು ವಿವಿಧ ಉಪಕ್ರಮಗಳು  

  • ಶಾಲೆಯ ಗ್ರಂಥಾಲಯದಲ್ಲಿ ಸಂಸ್ಕಾರ ಮತ್ತು ಧರ್ಮಾಚರಣೆಯ ಪುಸ್ತಕಗಳನ್ನು ಇಡಬೇಕು.
  • ಶಾಲೆಯ ಸಮಯದ ನಂತರ ಸಂಸ್ಕಾರವರ್ಗಗಳ ಆಯೋಜನೆ ಮಾಡುವುದು.
  • ಮಕ್ಕಳ ಪ್ರಗತಿಯ ಕುರಿತು ಪಾಲಕರೊಂದಿಗೆ ಮಾತನಾಡುವುದು.
  • ಶಾಲೆಯ ಕಾರ್ಯಕ್ರಮಗಳಲ್ಲಿ ಧರ್ಮಾಚರಣೆ ಮಾಡುವವರ, ಸಂತರ, ಸಾಧಕರ ಮಾರ್ಗದರ್ಶನದ ಆಯೋಜನೆ ಮಾಡುವುದು.
  • ಇತರ ಶಿಕ್ಷಕರಿಗೂ ಧರ್ಮಾಚರಣೆ, ಸಾಧನೆಯ ಕುರಿತು ತಿಳಿಸುವುದು.
  • ಇಷ್ಟನ್ನು ಶಿಕ್ಷಕರು ಮಾಡಿದರೆ ಸಮಾಜ ಸುಸಂಸ್ಕಾರಯುತವಾಗಲು ಸಹಾಯವಾಗುತ್ತದೆ. ಹೀಗೆ ಮಾಡಿದಲ್ಲಿ ಋಷಿ ಋಣ ಮತ್ತು ಸಮಾಜ ಋಣವನ್ನು ತೀರಿಸಿ ಅವರು ಈಶ್ವರನ ಕೃಪೆಗೆ ಪಾತ್ರರಾಗುತ್ತಾರೆ.
- ಸೌ. ವಂದನಾ ಕರಾಚೆ, ಶಿಕ್ಷಕಿ, ಪಿಂಪರಿ.

ಉಡುಪುಗಳು ಹೇಗಿರಬೇಕು ಮತ್ತು ಹೇಗಿರಬಾರದು...

ಬಟ್ಟೆಗಳು ಹೀಗಿರಬಾರದು!
  • ಟೆರಿಕಾಟ್, ಪಾಲಿಸ್ಟರ್, ನೈಲಾನ್ ನಂತಹ ಕೃತಕ ದಾರಗಳಿಂದ ತಯಾರಿಸಿದ,
  • ಒಗೆಯದ,
  • ಗಿಡ್ಡ, ಅತಿ ಸಡಿಲ,
  • ಜೀನ್ಸ್, ಸ್ಟ್ರೆಚೆಬಲ್ಸ್‌ನಂತಹ ಅತಿ ಬಿಗಿಯಾದ,
  • ಕೆಂಪು, ಹಸಿರುಗಳಂತಹ ಗಾಢ ಬಣ್ಣದ,
  • ಹಿಂದೂ ಧರ್ಮದಲ್ಲಿ ನಿಷೇಧಿಸಿದ ಕಪ್ಪುಬಣ್ಣದ,
  • ದೇವತೆಗಳ ಚಿತ್ರ, ಓಂ ಇತ್ಯಾದಿ ಶುಭಚಿಹ್ನೆಗಳಿರುವ ಬಟ್ಟೆಗಳನ್ನು ಧರಿಸಬಾರದು.
 ಬಟ್ಟೆಗಳು ಹೀಗಿರಬೇಕು!  
  • ಹತ್ತಿ, ರೇಷ್ಮೆ ಅಥವಾ ಉಣ್ಣೆಯಂತಹ ನೈಸರ್ಗಿಕ ದಾರಗಳಿಂದ ತಯಾರಿಸಿದ, 
  • ಒಗೆದಿರುವ,
  • ಯಂತ್ರಗಳ ಹೊಲಿಗೆ ಕಡಿಮೆ ಇರುವ,
  • ಮೈತುಂಬ ಮತ್ತು ಸಡಿಲವಾಗಿರುವ,
  • ಬಿಳಿ, ಹಳದಿ, ನೀಲಿಯಂತಹ ಸಾತ್ತ್ವಿಕ ಬಣ್ಣದ ಅಥವಾ ಇವುಗಳ ತಿಳಿ ಬಣ್ಣವಿರುವ,
  • ಆದಷ್ಟು ಯಾವುದೇ ವಿನ್ಯಾಸಗಳಿಲ್ಲದ ಬಟ್ಟೆಗಳನ್ನು ಧರಿಸಬೇಕು.

Saturday 20 August 2011

ಮಗುವಿನ ಹಕ್ಕುಗಳು

ಭಾರತದಲ್ಲಿನ 300 ದಶಲಕ್ಷ ಮಕ್ಕಳಲ್ಲಿ ಬಹುತೇಕ ಮಕ್ಕಳು ತಮ್ಮ ಶಾರೀರಕ ಹಾಗೂ ಬೌದ್ಧಿಕ ಅಭಿವೃದ್ಧಿಗೆ ತಡೆಯೊಡ್ಡುವ ಸಾಮಾಜಿಕ ಮತ್ತು ಆರ್ಥಿಕ ಪರಿಸರದಲ್ಲಿ ಜೀವಿಸುತ್ತಿದ್ದಾರೆ ಎಂಬುದು ವಾಸ್ತವ. ಭವಿಷ್ಯದ ವಿಚಾರಪೂರಿತ, ಸದೃಢ ಭಾರತವನ್ನು ನಿರ್ಮಾಣ ಮಾಡಲು ಮಕ್ಕಳ ಇಂತಹ ಅಗತ್ಯಗಳಿಗೆ ಸ್ಪಂದಿಸಲು ನಾವೆಲ್ಲಾ ಸಿದ್ಧರಾಗಬೇಕಾದುದು ಸದ್ಯದ ಆವಶ್ಯಕತೆಯಾಗಿದೆ.
ಭಾರತದಲ್ಲಿ ಸ್ವಾತಂತ್ರ್ಯೋತ್ತರ ದಶಕಗಳು ಮಕ್ಕಳ ಅಗತ್ಯಗಳ ಸಂವೈಧಾನಿಕ ನೀಡಿಕೆಗಳು, ನೀತಿಗಳು, ಕಾರ್ಯಕ್ರಮಗಳು ಮತ್ತು ಕಾಯಿದೆ ರಚನೆಗಳ ಮೂಲಕ ಸರ್ಕಾರದ ಬದ್ಧತೆಯ ಸ್ಪಷ್ಟ ಅಭಿವ್ಯಕ್ತಿಯನ್ನು ಕಂಡಿದೆ. ಈ ಶತಮಾನದ ಹಿಂದಿನ ದಶಕದಲ್ಲಿ ನಾಟಕೀಯ ತಾಂತ್ರಿಕ ಅಭಿವೃದ್ದಿಯು, ಮಕ್ಕಳನ್ನು ಉದ್ದೇಶಿಸಿದ, ಆರೋಗ್ಯ, ಪೌಷ್ಟಿಕಾಂಶ, ಶಿಕ್ಷಣ ಮತ್ತು ಇತರ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅವಕಾಶಗಳ ನವೀನ ಆಯಾಮವನ್ನೇ ತೆರೆದಿಟ್ಟಿದೆ.
ಭಾರತದಲ್ಲಿ, ಮಕ್ಕಳನ್ನೇ ಉದ್ದೇಶಿಸಿದ, ಅವರ ಸಮಸ್ಯೆಗಳಿಗೆ ಗಮನ ಕೇಂದ್ರೀಕರಿಸಿದ ಕಾರ್ಯಗಳಿಗಾಗಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳೆಲ್ಲಾ ಈಗ ಕೈಜೋಡಿಸಿವೆ. ಇದರಲ್ಲಿ ಮಕ್ಕಳು ಮತ್ತು ದುಡಿಮೆಗೆ ಸಂಬಂಧಿಸಿದ ವಿಷಯಗಳು, ಬಾಲದುಡಿಮೆಯ ಸವಾಲುಗಳನ್ನು ಪರಿಹರಿಸುವುದು, ಹೆಣ್ಣು ಶಿಶುವಿಗೆ ತೋರುವ ತಾರತಮ್ಯದ ನಿವಾರಣೆ, ಬೀದಿ ಮಕ್ಕಳನ್ನು ಮೇಲೆತ್ತುವುದು, ವಿಕಲ ಚೇತನ ಮಕ್ಕಳ ವಿಶೇಷ ಅಗತ್ಯಗಳನ್ನು ಗುರುತಿಸಿ ಪೂರೈಸುವುದು ಮತ್ತು ಅವರ ಮೂಲಭೂತ ಹಕ್ಕಾದ ಶಿಕ್ಷಣವು ಪ್ರತೀ ಮಗುವಿಗೆ ಪೂರೈಕೆಯಾಗುವಂತೆ ನೋಡಿಕೊಳ್ಳುವುದು, ಇದೆಲ್ಲಾ ಸೇರಿವೆ.

ಮೊಲದ ಮರಿ... ಮೊಲದ ಮರಿ...


ಮೊಲದ ಮರಿ ಮೊಲದ ಮರಿ
ಆಡು ಬಾರೇ..
ಚುಪುಕೆ ಚುಪುಕೆ ಚುಪುಕೆ ಚುಪುಕೆ
ನೆಗೆದು ಬಾರೆ

ದೊಡ್ಡದಾದ ಕಾಡಿನೊಳಗೆ
ಏನು ಮಾಡುವೆ
ಹೆಡ್ಡ ನೀನು ಪೊದರಿನೊಳಗೆ
ಏಕೆ ಅಡಗುವೆ?

ಪೊದರಿನಿಂದ ಪೊದರ ಬಳಿಗೆ
ನಿನ್ನ ಆಟ
ಗಿಡದ ಚಿಗುರು ನಿತ್ಯ ನಿನಗೆ
ಸೊಗಸಿನೂಟ

ಗಿಡ್ಡ ಬಾಲ ದೊಡ್ದ ಕಿವಿಯು
ನಿನಗೆ ಚೆಂದ
ಎದ್ದು ಎನ್ನ ಬಳಿಗೆ ಬಂದು
ಆಡೊ ಕಂದ

ಗೂಡು ಕಟ್ಟಿತಿಂಡಿ ಕೊಡುವೆ
ಪ್ರೀತಿಯಿಂದ
ಕಾಡಬಿಟ್ಟು ಊರ ಸೇರೋ
ಮೊಲದ ಕಂದಾ

ಮುದ್ದು ಮುದ್ದು ಮಾತುಗಳನು
ನಿನಗೆ ಕಲಿಸುವೇ
ಮುದ್ದು ಮಾಡಿ ಪ್ರೀತಿಯಿಂದ
ನಿನ್ನ ಸಲಹುವೇ
**********


ಚಿಂವ್ ಚಿಂವ್ ಗುಬ್ಬಿ...



ಗುಬ್ಬಿ ಗುಬ್ಬಿ
ಚಿಂವ್ ಚಿಂವ್
ಎಂದು ಕರೆಯುವೆ ಯಾರನ್ನು?

ಆಚೆ ಈಚೆ
ಹೊರಳಿಸಿ ಕಣ್ಣು
ನೋಡುವೆ ಏನನ್ನು?

ಮೇಲೆ ಕೆಳಗೆ
ಕೊಂಕಿಸಿ ಕೊರಳನು
ಹುಡುಕುವೆ ಏನಲ್ಲಿ?

ಕಾಳನು ಹುಡುಕುತ
ನೀರನು ನೋಡುತ
ಅಲೆಯುವೆ ಏಕಿಲ್ಲಿ?

ಕಾಳನು ಕೊಟ್ಟು
ನೀರನು ಕುಡಿಸುವೆ
ಆಡಲು ಬಾ ಇಲ್ಲಿ

ಹಣ್ಣನು ಕೊಟ್ಟು
ಹಾಲನು ನೀಡುವೆ
ನಲಿಯಲು ಬಾ ಇಲ್ಲಿ

ಪುಣ್ಯಕೋಟಿ ಎಂಬ ಗೋವಿನ ಹಾಡು


ಧರಣಿ ಮಂಡಲ ಮಧ್ಯದೊಳಗೆ
ಮೆರೆಯುವುದೈವತ್ತಾರು ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನು
ಪರಿಯ ನಾನೆಂತು ಪೇಳ್ವೆನು.
ಗಿರಿಗಳೆಡೆಯಲಿ ಅಡವಿ ನಡುವೆ
ತುರುವ ದೊಡ್ಡಿಯ ಮಾಡಿಕೋಂಡು
ಮೆರೆವ ಕಾಳಿಂಗನೆಂಬ ಗೊಲ್ಲನ
ಸಿರಿಯ ನಾನೆಂತು ಪೇಳ್ವೆನು.
ಗೊಲ್ಲದೊಡ್ಡಿಯೊಳಿರುವ ಹಸುಗಳು
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲನೊಳ್ಳೆಯ ನೀರ ಕುಡಿಯುತ
ಅಲ್ಲಿ ಮೆರೆದುವರಣ್ಯದಿ.
ಕರುಗಳನು ನೆನೆನೆನೆದು ಹಸುಗಳು
ಕೊರಳ ಘಂಟೆ ಢಣಿರು ಢಣಿರನೆ
ಪರಿದು ಲಂಘ್ಹಿಸಿ ಚಿಮ್ಮಿ ನೆಗೆಯುತ
ಮರಳಿ ಬಂದವು ದೊಡ್ಡಿಗೆ.
ತಮ್ಮ ತಾಯನು ಕಂಡು ಕರುಗಳು
ಅಮ್ಮಾ ಎಂದು ಕೂಗಿ ನಲಿಯುತ
ಸುಮ್ಮಾನದೊಳು ಮೊಲೆಯನುಂಡು
ನಿರ್ಮಲದೊಳು ಇದ್ದವು.
ಉದಯ ಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚದುರ ಶಿಖೆಯನು ಹಾಕಿದ.
ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲಗೌಡನು
ಬಳಸಿ ಬರುವ ತುರುಗಳನ್ನು
ಬಳಿಗೆ ಕರೆದನು ಹರುಷದಿ.
ಗಂಗೆ ಬಾರೇ ಗೌರಿ ಬಾರೇ
ತುಂಗಭದ್ರೆ ನೀನು ಬಾರೇ
ಕಾಮಧೇನು ನೀನು ಬಾರೆಂದು
ಪ್ರೇಮದಲಿ ಗೊಲ್ಲ ಕರೆದನು.
ಗೊಲ್ಲ ಕರೆದಾ ಧ್ವನಿಯ ಕೇಳಿ
ಎಲ್ಲ ಪಶುಗಳು ಬಂದುವಾಗ
ಚೆಲ್ಲಿ ಸೂಸಿ ಪಾಲ ಕರೆದು
ಅಲ್ಲಿ ತುಂಬಿತು ಬಿಂದಿಗೆ.
ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಬುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿ ಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು.
ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚೆದರಿ ಹೋದವು ಹಸುಗಳು.
ಪುಣ್ಯಕೋಟಿ ಎಂಬ ಗೋವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ.
ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು.
ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿ ಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು.
ಒಂದು ಬಿನ್ನಹ ಹುಲಿಯೆ ಕೇಳೈ
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ.
ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆಯೆಂದಿತು.
ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು.
ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆಯಿತ್ತು
ಕಂದನಿನ್ನನು ನೋಡಿ ಹೋಗುವೆ
ನೆಂದು ಬಂದೆನೆ ದೊಡ್ಡಿಗೆ.
ಅಮ್ಮ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಅಮ್ಮನಿಗೆ ಕರು ಹೇಳಲು.
ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ.
ಆರ ಮೊಲೆಯನು ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರು ನನಗೆ ಹಿತವರು.
ಅಮ್ಮಗಳಿರ ಅಕ್ಕಗಳಿರ
ನಮ್ಮ ತಾಯೊಡಹುಟ್ಟುಗಳಿರ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿಯನೀ ಕರುವನು.
ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು.
ಕಟ್ಟ ಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗ ಬೇಡ
ದುಷ್ತವ್ಯಾಘ್ರನು ಹೊಂಚುತಿರುವನು
ನಟ್ಟನಡುವಿರು ಕಂದನೆ.
ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ರುಣ ತೀರಿತೆಂದು
ತಬ್ಬಿ ಕೊಂಡಿತು ಕಂದನ.
ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು.
ಖಂಡವಿದೆ ಕೋ ಮಾಂಸವಿದೆ ಕೋ
ಗುಂಡಿಗೆಯ ಬಿಸಿ ರಕ್ತವಿದೆಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು.
ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು.
ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು.