Thursday 4 September 2014

ನೀರುಳಿತಾಯದ ಎರಡು ಮಾದರಿಗಳು

 
ನೀರುಳಿತಾಯದ ಎರಡು ಮಾದರಿಗಳು
ನಲ್ಲಿಯ ಕೆಳಗೆ ಇಟ್ಟಿದ್ದ ಪುಟ್ಟ ಬಕೆಟ್ ನೋಡಿ ರಮ ಕೇಳಿದರು. ಇದೇಕೆ? ನಲ್ಲಿಯಿಂದ ತೊಟ್ಟಿಕ್ಕುತ್ತಿದ್ದ ನೀರು ಹನಿ ಹನಿಯಾಗಿ ತುಂಬಿಕೊಳ್ಳುತ್ತಿತ್ತು. ಗಿಡಕ್ಕೆ ಹಾಕಲು ಎಂದಿದ್ದಕ್ಕೆ ನಲ್ಲಿ ರಿಪೇರಿ ಮಾಡಿಸೋದು ತಾನೇ ಅಂದ ರಮನಿಗೆ ದೊರೆತ ಉತ್ತರ ನೀವೂ ಕೇಳುವಂತಹುದೇ.
ಹೌದು. ಮಾಡಿಸಬಹುದು. ಹದಿನೈದು ದಿನ ಸರಿಯಾಗಿರುವ ನಲ್ಲಿ ರಿಪೇರಿಗೆ ೧೦೦ರೂ ಕೊಡಬೇಕು. ಅದರ ಬದಲಿಗೆ ನಲ್ಲಿ ಕೆಳಗೆ ಬಕೀಟಿಟ್ಟು ತುಂಬಿದಾಗೆಲ್ಲ ಗಿಡಗಳಿಗೆ ಹಾಕುತ್ತೀನಿ. ದಿನಕ್ಕೆ ಮೂರು ಬಾರಿ, ಅಂದರೆ ನಮ್ಮ ಮನೆಯ ಮುಂದಿರುವ ೩೫-೪೦ ಕುಂಡಗಳಲ್ಲಿರುವ ಗಿಡಗಳಿಗೆ ಇಷ್ಟು ನೀರು ಸಾಕಾಗುತ್ತೆ. ಒಂದು ಬಕೆಟ್ ನೀರು ಮೋರಿಗೆ ಹೋಗದಂತೆ ನೋಡಿಕೊಂಡರೆ, ಒಂದು ಬಕೆಟ್ ನೀರು ಉಳಿಸಿದಂತೆ ಅಲ್ವಾ?
ಮಾತು ಮುಗಿಯುವ ವೇಳೆಗೆ ಮನಸ್ಸು ಹತ್ತು ವರ್ಷಗಳ ಹಿಂದೆ ನಡೆದ ಘಟನೆಯನ್ನು ಮೆಲುಕು ಹಾಕುತ್ತಿತ್ತು. ಧರ್ಮಪುರಿಯಲ್ಲಿದ್ದ ಮೀನಾಕ್ಷಿ ಮನೆ ಅವರೇ ಕಟ್ಟಿದ್ದು. ಸ್ವತಃ ವಾಸ್ತು ಶಿಲ್ಪಿಯಾಗಿದ್ದ ಅವರು ಮನೆಯನ್ನು ‘ಎಕೊ ಫ್ರೆಂಡ್ಲಿ’ಯಾಗಿ ಕಟ್ಟಿದ್ದರು. ಮಳೆನೀರ ಸಂಗ್ರಹಕ್ಕಾಗಿ ತೊಟ್ಟಿ, ಯತೇಚ್ಛವಾಗಿ ಬರುವ ಗಾಳಿ ಬೆಳಕನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದರು. ಆದರೆ ಕಣ್ಣು ಕುಕ್ಕುವಂತೆ ಕಾಣಿಸುತ್ತಿದ್ದುದು ನಲ್ಲಿಯ ಕೆಳಗೆ ಇಟ್ಟಿದ್ದ ಬಣ್ಣದ ಪ್ಲಾಸ್ಟಿಕ್ ಬಕೀಟು. ಅದರ ಕುರಿತು ಮೀನಾಕ್ಷಿ ಹೇಳಿದ ಮಾತು ಸುಲಭದಲ್ಲಿ ಮರೆಯುವಂತಹುದಲ್ಲ. ‘ಎಷ್ಟೇ ಭದ್ರವಾಗಿ ನಿಲ್ಲಿಸಿದರೂ ಕೆಲವೊಮ್ಮೆ ನಲ್ಲಿ ಸೋರುತ್ತೆ. ಹನಿ ಹನಿ ನೀರು ತುಂಬ ಮುಖ್ಯ. ಗಿಡಗಳಿಗೆ ಹಾಕಲು, ಕೈಕಾಲು ತೊಳೆಯಲು ಈ ನೀರು ಬಳಸುತ್ತೀವಿ. ಬಂಗಾರಕ್ಕಿಂತ ಹೆಚ್ಚು ಬೆಲೆ ನೀರಿಗೆ ನಮ್ಮಲ್ಲಿ’.
ನೀರುಳಿತಾಯದ ಎರಡು ಮಾದರಿಗಳು
ಆ ಮಾತು ಎಷ್ಟು ಪರಿಣಾಮಕಾರಿಯಾಗಿತ್ತು ಅಂದರೆ, ನಲ್ಲಿ ಕೆಳಗೆ ಬಕೀಟು ಇಡದೆ ಇದ್ದರೆ ‘ಗಿಲ್ಟ್’ ಕಾಡುತ್ತೆ. ದೊಡ್ಡ ಅಪರಾಧ ಮಾಡಿದಂತೆ ಅನ್ನಿಸುತ್ತೆ. ಅಂದಿನಿಂದ ಈ ಅಭ್ಯಾಸ. ‘ಇನ್ನು ಮುಂದೆ ನಾವೂ ಅದೇ ಅಭ್ಯಾಸ ಮಾಡಿಕೊಳ್ಳುತ್ತೀವಿ’ ಎಂದು ಹೇಳಿದ ಮಾತು ಕಿವಿಗಷ್ಟೇ ಅಲ್ಲ, ಮನಸ್ಸಿಗೂ ತಂಪು ತರುವಂತಿತ್ತು. ಹತ್ತು ಮಾತಿಗಿಂತ ಒಂದು ಕೃತಿ ಲೇಸು. ಮನಸ್ಸಿನ ಮೇಲೆ ಪ್ರಭಾವ ಬೀರುವುದೆಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಡ ಅನ್ನಿಸಿತು.
ಸಾಕ್ಷಿ ಅಂದಾಗ ಮೊನ್ನೆ ಮೈಸೂರಿಗೆ ಹೋದಾಗ ‘ಕಾನನ’ ಸಾವಯವ ಫಾರ್ಮ್‌ನಲ್ಲಿ ನೋಡಿದ ಮಳೆನೀರು ಕೊಯಿಲಿಗಾಗಿ ಮಾಡಿದ್ದ ಸುಂದರ ಆಕಾರದ ಪೀಪಾಯಿ ಕಣ್ಮುಂದೆ ಬಂತು. ಒಂದು ಸಾವಿರ ಲೀಟರ್ ನೀರು ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯ ಉಳ್ಳ ಎರೆಡು ಪೀಪಾಯಿಗಳು ಮನೆಯ ಎರೆಡೂ ಪಕ್ಕಗಳಲ್ಲಿ. ಮನೆಯ ಹಿಂಭಾಗದಲ್ಲಿ ಎರೆಡು ಸಾವಿರ ನೀರು ಹಿಡಿಸುವ ನೀರಿನ ಟ್ಯಾಂಕ್. ಇದರ ಕಥೆಯನ್ನು ಗುರು ಪ್ರಸಾದ್ ಬಾಯಲ್ಲೇ ಕೇಳಬೇಕು.
‘ಪರಿಸರ  ಸ್ನೇಹಿ ಮನೆ ಕಟ್ಟಿದಾಗ ಮಳೆನೀರ ಕೊಯಿಲು ಮಾಡಲೇಬೇಕೆಂಬ ಆಲೋಚನೆ ಬಂತು. ಅದನ್ನು ನಾವೇ ಮಾಡಬೇಕೆಂದು ಕೊಂಡೆವು. (ಈ ಮನೆ ಮತ್ತು ಕಾನನ ತೋಟ, ಮೂರು ಕುಟುಂಬಗಳ ಸಹಕಾರಿ ಸಹಭಾಗಿತ್ವದಲ್ಲಿದೆ.) ಜಿ ಐ ತಂತಿ ಬಳಸಿ ‘ಕೊಡ’ದ ಆಕಾರ ಮಾಡಿಕೊಂಡೆವು. ಅದರ ಮೇಲೆ ಗೋಣಿ ಚೀಲ ಸುತ್ತಿ ಮಣ್ಣು ಮೆತ್ತಿ ಈ ಆಕಾರ ಬರುವಂತೆ ಮಾಡಿದೆವು. ನಂತರ ಅದರ ಮೇಲೆ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿದ್ದೇವೆ. ಮೇಲ್ಭಾಗದಲ್ಲಿ ಒಂದು ದೊಡ್ಡ ಸಿಮೆಂಟ್ ಕುಂಡ ಇಟ್ಟಿದ್ದೇವೆ. ಅದು ‘ಫಿಲ್ಟರ್’ ತರಹ ಕೆಲಸ ಮಾಡುತ್ತೆ. ಅದರ ಒಳಗೆ ಜಲ್ಲಿ, ಮರಳು, ಮೇಲೆ ಫಿಲ್ಟರ್ ಬಟ್ಟೆ ಹಾಕಿದ್ದೇವೆ. ಮನೆಯ ಮೇಲಿನ ಹೆಂಚಿನಿಂದ ಇಳಿದು ಬರುವ ನೀರು ಮೊದಲು ಪಕ್ಕದಲ್ಲಿರುವ ದೊಡ್ಡ ಕೊಳವೆಯೊಳಗೆ ಹೋಗುತ್ತದೆ. ಅದು ತುಂಬುವ ವೇಳೆಗೆ ಮಣ್ಣು ಕೆಳಗೆ ನಿಲ್ಲುತ್ತದೆ. ಮೇಲಿನಿಂದ ಹರಿಯುವ ನೀರು ಫಿಲ್ಟರ್ ಕುಂಡದಲ್ಲಿ ಇಳಿದು ನಂತರ ಪೀಪಾಯಿಯಲ್ಲಿ ಸಂಗ್ರಹವಾಗುತ್ತದೆ.
ಕುಡಿಯಲು, ಅಡಿಗೆ ಮಾಡಲು ಈ ನೀರನ್ನು ಬಳಸುತ್ತೀವಿ. ಅನಿಯಮಿತ ವಿದ್ಯುಚ್ಯಕ್ತಿಯಾದ್ದರಿಂದ ಕೆಲವೊಮ್ಮೆ ಗಿಡಗಳಿಗೂ ಬಳಸುವುದುಂಟು. ಇದರ ಆಕಾರ, ಬಣ್ಣ, ತೋಟ ನೋಡಲು ಬಂದವರಿಗೆ ಮೊದಲು ಕಾಣಿಸುತ್ತೆ. ಅಂಗೈಯೊಳಗೆ ಬೀಳುತ್ತಿರುವ ಹನಿ ಹನಿ ನೀರು, ಕೆಳಗಿರುವ ನಲ್ಲಿ ಇದು ಕುಡಿಯುವ ನೀರೆಂದು ಕೂಗಿ ಹೇಳುತ್ತದೆ. ಜೊತೆಗೇ ನೀರಿನ ಪಾಠ ಸಹ. ನಲ್ಲಿ ತಿರುಗಿಸಿದಾಗ ಚೆಲ್ಲುವ, ಬೀಳುವ, ತೊಟ್ಟಿಕ್ಕುವ ನೀರು ಕೆಳಗಿನ ತೊಟ್ಟಿಯಲ್ಲಿ ಸಂಗ್ರಹವಾಗುತ್ತದೆ. ನೋಡಿ, ನೀರು ಕುಡಿದ ಹಲವರ ಬಾಯಲ್ಲಿ ಉದ್ಗಾರ. ‘ಇಷ್ಟು ಸುಲಭನಾ ಮಳೆ ನೀರ ಕೊಯಿಲು, ನೀರೆಷ್ಟು ಸಿಹಿಯಾಗಿದೆ’. ಹಲವರು ಈ ಪದ್ಧತಿಯನ್ನು ಅನುಸರಿಸುತ್ತಿರುವುದನ್ನು ನೋಡಿದಾಗ, ಮಾತಾಡುವುದಕ್ಕಿಂತ ಮಾಡಿ ತೋರಿಸುವುದು ಮೇಲು ಅನ್ನಿಸುತ್ತೆ ಅಂತಾರೆ ಗುರು ಪ್ರಸಾದ್.
ತೋಟ ಸುತ್ತಿ ಬಂದು ಮನೆಯ ಹತ್ತಿರ ಇರುವ ‘ಸೋಲಾರ್ ಕುಕ್ಕರ್’ ಒಳಗಿರುವ ‘ಅಸ್ತ್ರ ಒಲೆ’ ಬಯೋ ಗ್ಯಾಸ್ ನೋಡಿ ಬಂದು, ಒಂದು ಲೋಟ ನೀರು ಕುಡಿದರೆ ‘ಆಹಾ ಎಂಥ ರುಚಿ’ ಅಂತ ತನಗೆ ತಾನೇ ಬಾಯಲ್ಲಿ ಬರುತ್ತೆ. ಯಾತಕ್ಕೆ ಬರ ಬಂದರೂ ಕುಡಿಯುವ ನೀರಿಗೆ ಬರ ಬರಬಾರದಪ್ಪ ಅಂತಾರೆ ಈ ನೀರು ಕುಡಿದವರು. ಇದಕ್ಕಿಂತ ಸಾಕ್ಷಿ ಬೇಕೇ? ನೀರು ಪೋಲು ಮಾಡುವವರ ವಿರುದ್ಧ ಸಮರ ಸಾರಿದಾಗಲೇ, ಹನಿ ಹನಿ ನೀರನ್ನು ಸಂಗ್ರಹಿಸಿದಾಗಲೇ ಮೀನಾಕ್ಷಿ, ಪ್ರಸಾದ್ ಅವರ ಸಾಲಿಗೆ ನಾವೂ ಸೇರಬಹುದು. ಏನಂತೀರಿ?
ಲೇಖನ:
ಅನುಸೂಯ ಶರ್ಮ
ಚಿತ್ರಗಳು:
ಎ. ಆರ್. ಎಸ್. ಶರ್ಮ.

ಮಕ್ಕಳೇ, ಓದುವಾಗ ತೆಗೆದುಕೊಳ್ಳಬೇಕಾದ ಜಾಗೃತೆ!


  • ಯಾವಾಗಲೂ ನೆಟ್ಟಗೆ ಕುಳಿತುಕೊಂಡು ಓದಬೇಕು. ಓದುವಾಗ ಮೇಜು ಹಾಗೂ ಕುರ್ಚಿ ಸ್ಥಿರವಾಗಿರಬೇಕು ಹಾಗೂ ಪುಸ್ತಕ ಮತ್ತು ಕಣ್ಣು ಇವುಗಳಲ್ಲಿನ ಅಂತರ ೩೦ ರಿಂದ ೩೫ ಸೆ.ಮಿ.ನಷ್ಟಿರಬೇಕು. ಓದುವ ಕೋಣೆಯಲ್ಲಿ ಸರಿಯಾಗಿ ಬೆಳಕಿರಬೇಕು. ಸಾಧ್ಯವಿದ್ದರೆ ಪುಸ್ತಕದ ಮೇಲೆ ಹಿಂದಿನಿಂದ ಅಥವಾ ಎಡ ಬದಿಯಿಂದ ಬೆಳಕು ಬೀಳಬೇಕು. ಅಂದರೆ ಪುಸ್ತಕ ಎಡ ಕೈಯಲ್ಲಿ ಹಿಡಿದು ಓದುವಾಗ ಬೆರಳುಗಳ ನೆರಳು ಬೀಳ ಬಾರದು.
  • ಓದುವಾಗ ಮಧ್ಯ-ಮಧ್ಯದಲ್ಲಿ ಕಣ್ಣು ಮುಚ್ಚ ಬೇಕು. ವಾಚನ ಹಾಗೂ ಬೆರಳಚ್ಚು, ಚಿತ್ರ ಬಿಡಿಸುವುದು, ಹೊಲಿಗೆ ಇತ್ಯಾದಿ ಹೆಚ್ಚು ಸಮಯ ಮಾಡಬೇಕಿದ್ದರೆ ಪ್ರತಿ ೧೫-೨೦ ನಿಮಿಷಕ್ಕೊಮ್ಮೆ ಸ್ವಲ್ಪ ಸಮಯ ನಿಲ್ಲಿಸಿ ೧-೨ ನಿಮಿಷ ಕಣ್ಣು ಮುಚ್ಚಿಕೊಳ್ಳಬೇಕು ಮತ್ತು ಯಾವುದಾದರೂ ವಸ್ತುವನ್ನು ನೋಡಿ ಧ್ಯಾನ ಮಾಡಬೇಕು ಅಥವಾ ದೂರದ ಯಾವುದಾದರೂ ವಸ್ತುವಿನ ಮೇಲೆ ದೃಷ್ಟಿ ಸ್ಥಿರಗೊಳಿಸಬೇಕು.

ಮಾಡ್ರನ್ ವಿಶ್ವಾಮಿತ್ರ

ಹಣ , ಖ್ಯಾತಿ, ಪ್ರಶಸ್ತಿ , ಪುರಸ್ಕಾರ .. ಈ ಯಾವುದಕ್ಕೂ ಆಸೆಪಡದೆ ಮೂಕ ಪ್ರಾಣಿಗಳ ನೆಮ್ಮದಿಯ ಬದುಕಿಗೆ ಆಸರೆಯಾಗಲಿ ಎಂಬ ಸದಾಶಯದಿಂದ ೧೨೦೦ ಎಕರೆ ವಿಸ್ತಾರದ ಕಾಡು ಸೃಷ್ಟಿಸಿದ ಧೀರ ಭಾರತೀಯನ ಕಥೆ...