ಮಕ್ಕಳನ್ನು ಹೊಡಿ, ಬಡಿ ಮಾಡಬೇಡಿ; ಶಿಸ್ತಾಗೇ ಬೆಳೆಸಿ
ಬೆಣ್ಣೆಯಂತ ಮನಸನ್ನು ಸರಿಯಾಗಿ ಅರ್ಥೈಸಿಕೊಳ್ಳಿ
ಈಗಿನ ಮಕ್ಕಳು ತುಂಬಾನೇ ಚುರುಕು. ಒಮ್ಮೆ ನೋಡಿದ ಅಥವಾ ಕಲಿತದ್ದನ್ನು ಸದಾ ನೆನಪಿಟ್ಟುಕೊಳ್ಳುವಂಥ ಮನಸ್ಥಿತಿ. ಮೂರು ವರ್ಷದ ಬುದ್ದಿ ನೂರ ವರ್ಷದ ತನಕ’ ಎನ್ನುವ ಗಾದೆ ಮಾತಿನಂತೆ. ಜೊತೆಗೆ ಮಕ್ಕಳ ಮನಸು ಬೆಣ್ಣೆಯಂತೆ. ಸರಿಯಾದ ಸಂಸ್ಕಾರ ನೀಡಿ ಶಿಸ್ತು ಕಲಿಸಿದರೆ ತಮ್ಮ ಜೀವನದುದ್ದಕ್ಕೂ ಪಾಲಿಸುತ್ತಾರೆ. ಮೃದು ಮನಸಿಗೆ ಪೆಟ್ಟು ಮಾಡದೆ ನಯವಾಗಿ ತಿದ್ದುವುದು ಪೋಷಕರ, ತಂದೆ ತಾಯಿಗಳ ಬುದ್ಧಿವಂತಿಕೆ
ನಾವು ಏನು ಮಾಡುತ್ತೇವೆಯೋ ಅದನ್ನೇ ಮಕ್ಕಳೂ ಅನುಸರಿಸುತ್ತಾರೆ ಎಂಬುದು ನೆನಪಿನಲ್ಲಿರಬೇಕು. ಹೀಗಾಗಿ ಮಕ್ಕಳೆದುರು ನಾವು ಸರಿಯಾಗಿ ನಡೆದುಕೊಳ್ಳುವುದನ್ನು ಮೊದಲು ರೂಢಿಸಿಕೊಳ್ಳಬೇಕು. ನಂತರ ಅವರಿಗೆ ಪಾಠ ಹೇಳಿಕೊಡಬೇಕು. ಮೊದಲಾದರೆ ಅವಿಭಕ್ತ ಕುಟುಂಬವಿರುತ್ತಿತ್ತು. ಒಬ್ಬರಲ್ಲ ಒಬ್ಬರು ಮಕ್ಕಳನ್ನು ಗಮನಿಸಿಕೊಳ್ಳುತ್ತಿದ್ದರು ಅಥವಾ ತಿದ್ದಿ ತೀಡುತ್ತಿದ್ದರು. ಆದರೆ ಕಾಲ ಬದಲಾಗಿದೆ. ಈಗ ವಿಭಕ್ತ ಕುಟುಂಭಗಳು. ಸಂಸಾರ ಎಂದರೆ ಗಂಡ-ಹೆಂಡತಿ-ಮಗು ಎಂಬ ಕಲ್ಪನೆ. ಮನೆಯಲ್ಲಿ ಹೆಚ್ಚೆಂದರೆ ಎರಡು ಮಕ್ಕಳು, ಹೀಗಾಗಿ ಮಕ್ಕಳನ್ನು ತುಂಬಾ ಪ್ರೀತಿಯಿಂದ ಬೆಳೆಸಿ ಕೇಳಿದ್ದನ್ನೆಲ್ಲ ಕೊಡಿಸುತ್ತಾರೆ. ಮೂರನೆಯವರ ಎದುರು ಅವರ ಪ್ರತಿಭೆ ತೋರಿಸಬೇಕಿದ್ದರೆ ಅವರ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ. ಹಠ, ರಗಳೆ ಮಾಡಿದರೆ ಮಕ್ಕಳು ಕೇಳಿದ್ದೆಲ್ಲ ಅವರ ಮುಂದೆ ಹಾಜರ್. ಇದರಿಂದ ಮಕ್ಕಳಲ್ಲಿ ಮಕ್ಕಳಲ್ಲಿ ಮೊಂಡುತನ ಹೆಚ್ಚಾಗಬಹುದು. ಹಠ ಮಾಡಿದರೆ ಬಯಸಿದ್ದು ಸಿಗುತ್ತದೆ ಎಂಬ ಭಾವನೆ ಬೆಳೆಸಿಕೊಳ್ಳುವ ಮಕ್ಕಳು ದೊಡ್ಡವರಾದ ಮೇಲೆಯೂ ಅದನ್ನೇ ಮುಂದುವರಿಸುತ್ತಾರೆ. ಆ ಮೇಲೆ ತಿದ್ದುವುದು ಕಷ್ಟ. ಆದ್ದರಿಂದ ಮಕ್ಕಳು ಹಠ ಮಾಡಿದಾಗಲೆಲ್ಲ ಅವರು ಕೇಳಿದ್ದನ್ನೆಲ್ಲ ಕೊಡಿಸಬೇಡಿ. ಬುದ್ಧಿವಂತಿಕೆಯಿಂದ, ನಿಧಾನವಾಗಿ ವಾಸ್ತವದ ಕುರಿತು ತಿಳಿವಳಿಕೆ ನೀಡಿ.
ಮಕ್ಕಳು ಆಸೆಪಟ್ಟಿದ್ದನ್ನು ಸಾಲ ಮಾಡಿಯಾದರೂ ತಂದುಕೊಡಬೇಕು ಎಂಬ ಜಾಯಮಾನ ಬಿಟ್ಟು ಅಷ್ಟೊಂದು ಬೆಲೆ ಬಾಳುವ ಅಗತ್ಯವಿಲ್ಲದ ವಸ್ತುಗಳ ಅಗತ್ಯ ನಿನಗಿಲ್ಲ’ ಎಂಬುದನ್ನು ಮುಗಿವಿಗೆ ಮನದಟ್ಟು ಮಾಡಿಕೊಟ್ಟರೆ ‘ತಾನು ಆಸೆಪಟ್ಟದ್ದೆಲ್ಲ ಸಿಗುವುದಿಲ್ಲ. ಆಕಾಶಕ್ಕೆ ಏಣಿ ಹಾಕಲಾಗದು’ ಎಂಬುದರ ಅರಿವು ಮಕ್ಕಳಿಗೂ ಆಗಿಬಿಡುತ್ತದೆ.
ಇಂದಿನ ಆಧುನಿಕ ಯುಗದಲ್ಲಿ ಅನೇಕ ಸಂಸಾರಗಳಲ್ಲಿ ಹೆಣ್ಣಾಗಲಿ, ಗಂಡಾಗಲಿ ಒಂದೇ ಮಗು ಸಾಕು. ಅದನ್ನೆ ಚೆನ್ನಾಗಿ ನೋಡಿಕೊಂಡರಾಯಿತು ಎಂಬ ಮನೋಭಾವ ಹೆಚ್ಚಾಗುತ್ತಿದೆ. ಆದ್ದರಿಂದ ಮಕ್ಕಳನ್ನು ತುಂಬಾ ಪ್ರೀತಿಯಿಂದ, ಮುದ್ದು ಮುದ್ದಾಗಿ ಬೆಳೆಸುತ್ತಾರೆ. ಅವರ ಕೈಯಲ್ಲಿ ಒಂದು ಸಣ್ಣ ಕೆಲಸವನ್ನು ಮಾಡಿಸುವುದಿಲ್ಲ. ಊಟ, ತಿಂಡಿಯಿಂದ ಹಿಡಿದು ಒಂದು ವೇಳೆ ಮಗು ಹಠ ಮಾಡಿದರೆ ಹೋಮ ವರ್ಕ್ ಕೂಡ ಪೋಷಕರೇ ಮಾಡಿರುವಂಥ ಅನೇಕ ಉದಾಹರಣೆಗಳಿದೆ. ಇದು ಮಕ್ಕಳ ಭವಿಷ್ಯ ದೃಷ್ಟಿಯಿಂದ ತುಂಬಾನೆ ತಪ್ಪು.
ಮಕ್ಕಳು ಆದಷ್ಟು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವಂತೆ ಪ್ರೇರೇಪಿಸಬೇಕು. ಊಟ, ತಿಂಡಿಯಾದ ನಂತರ ತಮ್ಮ ತಟ್ಟೆ, ಲೋಟಗಳನ್ನು ತಾವೇ ತೆಗೆದುಕೊಂಡು ಹೋಗುವುದು, ತೊಳೆಯುವುದನ್ನು ಅಭ್ಯಾಸ ಮಾಡಿಸಬೇಕು. ಸ್ವಲ್ಪ ದಿನ ಹೀಗೆ ಮಾಡಿಸಿದರೆ ತಾವೇ ತಾವಾಗಿ ಆಸಕ್ತಿ ಮೂಡಿಸಿಕೊಂಡು ಉತ್ಸಾಹದಿಂದ ಮಾಡುತ್ತಾರೆ.
ಚಿಕ್ಕಪುಟ್ಟ ಕೆಲಸಗಳಲ್ಲಿ ಆಸಕ್ತಿ-ಉತ್ಸಾಹ ಬಂದರೆ ಮುಂದಿನ ದಿನಗಳಲ್ಲಿ ಜವಾಬ್ದಾರಿಯುತ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಾರೆ. ಎಲ್ಲವನ್ನು ಕೈ ಹಿಡಿದು ಹೇಳಿಕೊಡುವ ಅಗತ್ಯವಿರುವುದಿಲ್ಲ.
ಮಗು ಅಭ್ಯಾಸ ಮಾಡಲು, ಸ್ನಾನ, ಊಟ ಮಾಡಲು ಚಾಕೊಲೇಟ್, ಕ್ಯಾಂಡಿ ಮತ್ತಿತರ ಆಮಿಷ ತೋರಿಸದಿರಿ, ಕ್ರಮೇಣ ಮಕ್ಕಳಿಗೆ ಇದೇ ಅಭ್ಯಾಸವಾಗಿಬಿಡುತ್ತದೆ. ಹೆಜ್ಜೆ ಹೆಜ್ಜೆಗೂ ಏನಾದರೊಂದು ಬೇಕು ಎನ್ನುತ್ತಾರೆ. ಮಗುವಿನ ಮನವೊಲಿಸಿ ಇಂತಹ ಕೆಲಸಗಳನ್ನು ಮಾಡಿಸಬೇಕೇ ಹೊರತು ಆಮಿಷದಿಂದಲ್ಲ.
ಮಕ್ಕಳನ್ನು ಅನಗತ್ಯವಾಗಿ ಬಯ್ಯುವುದು, ಸಣ್ಣ ಸಣ್ಣ ತಪ್ಪಿಗೂ ನೆಂಟರ ಎದುರು, ಸ್ನೇಹಿತರ ಎದುರು ಬಯ್ಯುವುದು, ಶಿಕ್ಷೆ ನೀಡುವುದು ಮಾಡಿದರೆ ಮಕ್ಕಳು ಕುಗ್ಗಿ ಹೋಗುತ್ತರೆ. ಕೀಳರಿಮೆಯಿಂದ ನರಳುತ್ತಾರೆ.
ಅತಿಥಿಗಳನ್ನು ಮಾತನಾಡಿಸುವುದು, ಫೋನ್ಗಳಲ್ಲಿ ಸಭ್ಯವಾಗಿ ಮಾತನಾಡುವುದು, ಗುರು-ಹಿರಿಯನ್ನು ಗೌರವಿಸುವುದು , ಹೆತ್ತವರ ಮಾತಿಗೆ ಬೆಲೆ ನೀಡುವುದು, ದೇವರಲ್ಲಿ ನಂಬಿಕೆ ಇಡುವುದು , ತಾಳ್ಮೆ, ಬಡವರು-ರೋಗಿಗಳು-ಅಂಗವಿಕಲರನ್ನು ಅನುಕಂಪದಿಂದ ಕಾಣುವುದು ಮುಂತಾದ ಸಂಸ್ಕಾರಗಳನ್ನು ಚಿಕ್ಕವರಿರುವಾಗಲೇ ಹೇಳಿಕೊಟ್ಟರೆ ಮುಂದೆ ಆದರ್ಶ ವ್ಯಕ್ತಿಗಳಾಗುತ್ತಾರೆ.
ಸಹನೆ, ತಾಳ್ಮೆ ಕಲಿಸಿ, ಧರ್ಮ, ಆಚಾರ-ವಿಚಾರಗಳಲ್ಲಿ ಸಂಪ್ರದಾಯದಲ್ಲಿ ಶ್ರದ್ಧೆ ಬೆಳೆಸಿ. ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಮನೋಭಾವ ರೂಢಿಸಿ. ಇದು ಅವರ ವ್ಯಕ್ತಿತ್ವಕ್ಕೆ ಕಳಸವಿದ್ದಂತೆ.
ಒಳ್ಳೊಳ್ಳೆ ಚಿತ್ರ, ಪುಸ್ತಕಗಳನ್ನು ತಂದುಕೊಟ್ಟರೆ ಮಕ್ಕಳು ಕಾಡು ಹರಟೆ, ಟಿವಿಯಿಂದ ದೂರ ಉಳಿಯುತ್ತಾರೆ. ಚೆಸ್, ಪಗಡೆ ಮುಂತಾದವನ್ನು ಆಡುವಂತೆ ಪ್ರೇರೇಪಿಸಿ, ಬಣ್ಣ ತುಂಬುವುದು, ರಂಗೋಲಿ ಬಿಡಿಸುವುದು, ಹಾಡು ಹೇಳುವುದು ಮುಂತಾದ ಹವ್ಯಾಸಗಳನ್ನು ಬೆಳೆಸಿ ಪ್ರೋತ್ಸಾಹಿಸಬೇಕು. ಸೃಜನಶೀಲ ಮಕ್ಕಳು ಮುಂದೆ ಕಲಾವಿದರಾಗುತ್ತಾರೆ. ಪ್ರತಿಭೆ ಚಿಗುರಲು ನಾವು ಅವಕಾಶ ಮಾಡಿಕೊಡಬೇಕು.
ಹೆತ್ತವರು ಮಕ್ಕಳೆದುರು ದಿನಾ ಜಗಳವಾಡುವುದು, ಬಯ್ಯುವುದು, ಅಶಿಸ್ತು, ಇಂತವನ್ನೆಲ್ಲ ಬಿಟ್ಟು ಸಾಕಷ್ಟು ಕಾಲ ಮಕ್ಕಳೊಂದಿಗೆ ಸಮಯ ಕಳೆಯಬೇಕು. ಸಲಿಗೆಯಿಂದ ಅವರ ತಪ್ಪು ತಿದ್ದಿ, ಮನಸು ಅರಿತು ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಪ್ರೋತ್ಸಾಹಿಸಬೇಕು. ಆಗ ಇಂದಿನ ಮಕ್ಕಳೇ ನಾಳಿನ ಭವಿಷ್ಯ ಎನ್ನುವುದು ಸಾಕಾರವಾಗುತ್ತದೆ.
No comments:
Post a Comment