Monday, 26 September 2011

ಮಕ್ಕಳು ಊಟ ತಿನ್ನುವಂತೆ ಮಾಡುವುದು ಹೀಗೆ

 
ಮಕ್ಕಳು ಊಟ ತಿಂಡಿ ತಿನ್ನಲು ತುಂಬಾ ಹಠ ಮಾಡುತ್ತವೆ. ಆದರೆ ಮಕ್ಕಳಿಗೆ ಊಟ ತಿಂಡಿ ನೀಡುವಾಗ ತಾಯಂದಿರು ಕೆಲವು ಅಂಶವನ್ನು ಗಮನದಲ್ಲಿಟ್ಟುಕೊಂಡರೆ, ಮಕ್ಕಳಿಗೆ ಆಹಾರದ ವಿಷಯದಲ್ಲಿ ಶಿಸ್ತನ್ನು ರೂಢಿಸಿ, ಸರಿಯಾಗಿ ಆಹಾರ ಸೇವಿಸುವಂತೆ ಮಾಡಲು ಸಹಾಯವಾಗುತ್ತದೆ.

ಮಕ್ಕಳಿಗೆ ಆಹಾರ ನೀಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ:

1. ಮಕ್ಕಳಿಗೆ ದಿನಕ್ಕೆ ಮೂರು ಬಾರಿ ತಿನ್ನಲು ಸಾಧ್ಯವಾಗುವುದಿಲ್ಲ. ಆದ್ದರಿಂದ ದಿನಕ್ಕೆ ಒಂದು ಬಾರಿ ಊಟ ಮತ್ತು ಎರಡು ಬಾರಿ ಲಘು ಆಹಾರ ನೀಡಿದರೆ ಉತ್ತಮ.

2. ಮಕ್ಕಳಿಗೆ ಹಾಲು ಅಥವಾ ಜ್ಯೂಸ್ ನೀಡಿದರೆ ಅವುಗಳಿಗೆ ಊಟ ತಿನ್ನಲು ಸಾಧ್ಯವಾಗದೆ ಇರಬಹುದು. ಆದ್ದರಿಂದ ಜ್ಯೂಸ್ ಅಥವಾ ಹಾಲಿನ ಸೇವನೆ ನಂತರ ಮಕ್ಕಳನ್ನು ಸ್ವಲ್ಪ ಸಮಯ ಆಟವಾಡಲು ಬಿಟ್ಟರೆ ಬೇಗ ಜೀರ್ಣವಾಗಿ ಊಟಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ.

3. ಪ್ರತಿನಿತ್ಯವೂ ಒಂದೇ ತರಹದ ಆಹಾರ ಬೇಡ. ಒಂದೇ ರೀತಿಯ ಆಹಾರದಿಂದ ಮಕ್ಕಳು ತಿನ್ನುವುದನ್ನು ತ್ಯಜಿಸಬಹುದು. ಆದ್ದರಿಂದ ಮಕ್ಕಳಿಗೆ ಇಷ್ಟವಾಗುವಂತೆ ದಿನನಿತ್ಯ ಹೊಸ ಹೊಸ ಅಡುಗೆ ಮಾಡಿದರೆ ಮಕ್ಕಳೂ ಇಷ್ಟ ಪಟ್ಟು ಸೇವಿಸುತ್ತಾರೆ.

4. ಮಕ್ಕಳ ಮೇಲೆ ತಿನ್ನುವಂತೆ ಅತಿಯಾದ ಒತ್ತಡ ಹೇರಬೇಡಿ. ಇದರಿಂದ ಅವರು ಹಠ ಹಿಡಿಯಬಹುದು. ಆದಷ್ಟು ಒಳ್ಳೆಯ ರೀತಿಯೇ ಆಹಾರ ತಿನ್ನಿಸಲು ಪ್ರಯತ್ನಿಸಿ.

5. ಮಕ್ಕಳ ಆಹಾರದಲ್ಲಿ ಹಣ್ಣುಗಳನ್ನು ಹೆಚ್ಚಾಗಿ ಸೇರಿಸಿ. ಚೆರ್ರಿ, ಸ್ಟ್ರಾಬೆರಿಯಂತಹ ಹಣ್ಣುಗಳನ್ನು ಮಕ್ಕಳು ಇಷ್ಟ ಪಟ್ಟು ತಿನ್ನುತ್ತಾರೆ.

6. ನೀವು ನೀಡುತ್ತಿರುವ ಆಹಾರದಲ್ಲಿ ಎಷ್ಟು ಪೋಷಕಾಂಶವಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನೀಡಿದರೆ ಮಕ್ಕಳ ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

7. ಆಹಾರದಲ್ಲಿ ಮೊಸರು, ಮೊಟ್ಟೆ, ಮೀನು, ಕಿಡ್ನಿ ಬೀನ್ಸ್, ಇವುಗಳು ಇರುವಂತೆ ನೋಡಿಕೊಳ್ಳಿ.

ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಮಕ್ಕಳು ಆಹಾರದೆಡೆಗೆ ನಿರ್ಲಕ್ಷ್ಯ ತೋರುವುದನ್ನು ತಪ್ಪಿಸಬಹುದು. ಈ ಮೂಲಕ ಮುಂದೆ ಬರುವ ಆಹಾರ ಸಮಸ್ಯೆಗಳನ್ನೂ ತಪ್ಪಿಸಬಹುದು.

Friday, 2 September 2011

ನೀರುಳಿತಾಯದ ಎರಡು ಮಾದರಿಗಳು

ನೀರುಳಿತಾಯದ ಎರಡು ಮಾದರಿಗಳು  



ನಲ್ಲಿಯ ಕೆಳಗೆ ಇಟ್ಟಿದ್ದ ಪುಟ್ಟ ಬಕೆಟ್ ನೋಡಿ ರಮ ಕೇಳಿದರು. ಇದೇಕೆ? ನಲ್ಲಿಯಿಂದ ತೊಟ್ಟಿಕ್ಕುತ್ತಿದ್ದ ನೀರು ಹನಿ ಹನಿಯಾಗಿ ತುಂಬಿಕೊಳ್ಳುತ್ತಿತ್ತು. ಗಿಡಕ್ಕೆ ಹಾಕಲು ಎಂದಿದ್ದಕ್ಕೆ ನಲ್ಲಿ ರಿಪೇರಿ ಮಾಡಿಸೋದು ತಾನೇ ಅಂದ ರಮನಿಗೆ ದೊರೆತ ಉತ್ತರ ನೀವೂ ಕೇಳುವಂತಹುದೇ.
ಹೌದು. ಮಾಡಿಸಬಹುದು. ಹದಿನೈದು ದಿನ ಸರಿಯಾಗಿರುವ ನಲ್ಲಿ ರಿಪೇರಿಗೆ ೧೦೦ರೂ ಕೊಡಬೇಕು. ಅದರ ಬದಲಿಗೆ ನಲ್ಲಿ ಕೆಳಗೆ ಬಕೀಟಿಟ್ಟು ತುಂಬಿದಾಗೆಲ್ಲ ಗಿಡಗಳಿಗೆ ಹಾಕುತ್ತೀನಿ. ದಿನಕ್ಕೆ ಮೂರು ಬಾರಿ, ಅಂದರೆ ನಮ್ಮ ಮನೆಯ ಮುಂದಿರುವ ೩೫-೪೦ ಕುಂಡಗಳಲ್ಲಿರುವ ಗಿಡಗಳಿಗೆ ಇಷ್ಟು ನೀರು ಸಾಕಾಗುತ್ತೆ.
ಒಂದು ಬಕೆಟ್ ನೀರು ಮೋರಿಗೆ ಹೋಗದಂತೆ ನೋಡಿಕೊಂಡರೆ, ಒಂದು ಬಕೆಟ್ ನೀರು ಉಳಿಸಿದಂತೆ ಅಲ್ವಾ?
ಮಾತು ಮುಗಿಯುವ ವೇಳೆಗೆ ಮನಸ್ಸು ಹತ್ತು ವರ್ಷಗಳ ಹಿಂದೆ ನಡೆದ ಘಟನೆಯನ್ನು ಮೆಲುಕು ಹಾಕುತ್ತಿತ್ತು. ಧರ್ಮಪುರಿಯಲ್ಲಿದ್ದ ಮೀನಾಕ್ಷಿ ಮನೆ ಅವರೇ ಕಟ್ಟಿದ್ದು. ಸ್ವತಃ ವಾಸ್ತು ಶಿಲ್ಪಿಯಾಗಿದ್ದ ಅವರು ಮನೆಯನ್ನು ‘ಎಕೊ ಫ್ರೆಂಡ್ಲಿ’ಯಾಗಿ ಕಟ್ಟಿದ್ದರು. ಮಳೆನೀರ ಸಂಗ್ರಹಕ್ಕಾಗಿ ತೊಟ್ಟಿ, ಯತೇಚ್ಛವಾಗಿ ಬರುವ ಗಾಳಿ ಬೆಳಕನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದರು. ಆದರೆ ಕಣ್ಣು ಕುಕ್ಕುವಂತೆ ಕಾಣಿಸುತ್ತಿದ್ದುದು ನಲ್ಲಿಯ ಕೆಳಗೆ ಇಟ್ಟಿದ್ದ ಬಣ್ಣದ ಪ್ಲಾಸ್ಟಿಕ್ ಬಕೀಟು. ಅದರ ಕುರಿತು ಮೀನಾಕ್ಷಿ ಹೇಳಿದ ಮಾತು ಸುಲಭದಲ್ಲಿ ಮರೆಯುವಂತಹುದಲ್ಲ. ‘ಎಷ್ಟೇ ಭದ್ರವಾಗಿ ನಿಲ್ಲಿಸಿದರೂ ಕೆಲವೊಮ್ಮೆ ನಲ್ಲಿ ಸೋರುತ್ತೆ. ಹನಿ ಹನಿ ನೀರು ತುಂಬ ಮುಖ್ಯ. ಗಿಡಗಳಿಗೆ ಹಾಕಲು, ಕೈಕಾಲು ತೊಳೆಯಲು ಈ ನೀರು ಬಳಸುತ್ತೀವಿ.
ಬಂಗಾರಕ್ಕಿಂತ ಹೆಚ್ಚು ಬೆಲೆ ನೀರಿಗೆ ನಮ್ಮಲ್ಲಿ’.
ನೀರುಳಿತಾಯದ ಎರಡು ಮಾದರಿಗಳು
ಆ ಮಾತು ಎಷ್ಟು ಪರಿಣಾಮಕಾರಿಯಾಗಿತ್ತು ಅಂದರೆ, ನಲ್ಲಿ ಕೆಳಗೆ ಬಕೀಟು ಇಡದೆ ಇದ್ದರೆ ‘ಗಿಲ್ಟ್’ ಕಾಡುತ್ತೆ. ದೊಡ್ಡ ಅಪರಾಧ ಮಾಡಿದಂತೆ ಅನ್ನಿಸುತ್ತೆ. ಅಂದಿನಿಂದ ಈ ಅಭ್ಯಾಸ. ‘ಇನ್ನು ಮುಂದೆ ನಾವೂ ಅದೇ ಅಭ್ಯಾಸ ಮಾಡಿಕೊಳ್ಳುತ್ತೀವಿ’ ಎಂದು ಹೇಳಿದ ಮಾತು ಕಿವಿಗಷ್ಟೇ ಅಲ್ಲ, ಮನಸ್ಸಿಗೂ ತಂಪು ತರುವಂತಿತ್ತು. ಹತ್ತು ಮಾತಿಗಿಂತ ಒಂದು ಕೃತಿ ಲೇಸು. ಮನಸ್ಸಿನ ಮೇಲೆ ಪ್ರಭಾವ ಬೀರುವುದೆಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಡ ಅನ್ನಿಸಿತು.
ಸಾಕ್ಷಿ ಅಂದಾಗ ಮೊನ್ನೆ ಮೈಸೂರಿಗೆ ಹೋದಾಗ ‘ಕಾನನ’ ಸಾವಯವ ಫಾರ್ಮ್‌ನಲ್ಲಿ ನೋಡಿದ ಮಳೆನೀರು ಕೊಯಿಲಿಗಾಗಿ ಮಾಡಿದ್ದ ಸುಂದರ ಆಕಾರದ ಪೀಪಾಯಿ ಕಣ್ಮುಂದೆ ಬಂತು. ಒಂದು ಸಾವಿರ ಲೀಟರ್ ನೀರು ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯ ಉಳ್ಳ ಎರೆಡು ಪೀಪಾಯಿಗಳು ಮನೆಯ ಎರೆಡೂ ಪಕ್ಕಗಳಲ್ಲಿ. ಮನೆಯ ಹಿಂಭಾಗದಲ್ಲಿ ಎರೆಡು ಸಾವಿರ ನೀರು ಹಿಡಿಸುವ ನೀರಿನ ಟ್ಯಾಂಕ್. ಇದರ ಕಥೆಯನ್ನು ಗುರು ಪ್ರಸಾದ್ ಬಾಯಲ್ಲೇ ಕೇಳಬೇಕು.
‘ಪರಿಸರ  ಸ್ನೇಹಿ ಮನೆ ಕಟ್ಟಿದಾಗ ಮಳೆನೀರ ಕೊಯಿಲು ಮಾಡಲೇಬೇಕೆಂಬ ಆಲೋಚನೆ ಬಂತು. ಅದನ್ನು ನಾವೇ ಮಾಡಬೇಕೆಂದು ಕೊಂಡೆವು. (ಈ ಮನೆ ಮತ್ತು ಕಾನನ ತೋಟ, ಮೂರು ಕುಟುಂಬಗಳ ಸಹಕಾರಿ ಸಹಭಾಗಿತ್ವದಲ್ಲಿದೆ.) ಜಿ ಐ ತಂತಿ ಬಳಸಿ ‘ಕೊಡ’ದ ಆಕಾರ ಮಾಡಿಕೊಂಡೆವು. ಅದರ ಮೇಲೆ ಗೋಣಿ ಚೀಲ ಸುತ್ತಿ ಮಣ್ಣು ಮೆತ್ತಿ ಈ ಆಕಾರ ಬರುವಂತೆ ಮಾಡಿದೆವು. ನಂತರ ಅದರ ಮೇಲೆ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿದ್ದೇವೆ. ಮೇಲ್ಭಾಗದಲ್ಲಿ ಒಂದು ದೊಡ್ಡ ಸಿಮೆಂಟ್ ಕುಂಡ ಇಟ್ಟಿದ್ದೇವೆ. ಅದು ‘ಫಿಲ್ಟರ್’ ತರಹ ಕೆಲಸ ಮಾಡುತ್ತೆ. ಅದರ ಒಳಗೆ ಜಲ್ಲಿ, ಮರಳು, ಮೇಲೆ ಫಿಲ್ಟರ್ ಬಟ್ಟೆ ಹಾಕಿದ್ದೇವೆ. ಮನೆಯ ಮೇಲಿನ ಹೆಂಚಿನಿಂದ ಇಳಿದು ಬರುವ ನೀರು ಮೊದಲು ಪಕ್ಕದಲ್ಲಿರುವ ದೊಡ್ಡ ಕೊಳವೆಯೊಳಗೆ ಹೋಗುತ್ತದೆ. ಅದು ತುಂಬುವ ವೇಳೆಗೆ ಮಣ್ಣು ಕೆಳಗೆ ನಿಲ್ಲುತ್ತದೆ. ಮೇಲಿನಿಂದ ಹರಿಯುವ ನೀರು ಫಿಲ್ಟರ್ ಕುಂಡದಲ್ಲಿ ಇಳಿದು ನಂತರ ಪೀಪಾಯಿಯಲ್ಲಿ ಸಂಗ್ರಹವಾಗುತ್ತದೆ.
ಕುಡಿಯಲು, ಅಡಿಗೆ ಮಾಡಲು ಈ ನೀರನ್ನು ಬಳಸುತ್ತೀವಿ. ಅನಿಯಮಿತ ವಿದ್ಯುಚ್ಯಕ್ತಿಯಾದ್ದರಿಂದ ಕೆಲವೊಮ್ಮೆ ಗಿಡಗಳಿಗೂ ಬಳಸುವುದುಂಟು. ಇದರ ಆಕಾರ, ಬಣ್ಣ, ತೋಟ ನೋಡಲು ಬಂದವರಿಗೆ ಮೊದಲು ಕಾಣಿಸುತ್ತೆ. ಅಂಗೈಯೊಳಗೆ ಬೀಳುತ್ತಿರುವ ಹನಿ ಹನಿ ನೀರು, ಕೆಳಗಿರುವ ನಲ್ಲಿ ಇದು ಕುಡಿಯುವ ನೀರೆಂದು ಕೂಗಿ ಹೇಳುತ್ತದೆ. ಜೊತೆಗೇ ನೀರಿನ ಪಾಠ ಸಹ. ನಲ್ಲಿ ತಿರುಗಿಸಿದಾಗ ಚೆಲ್ಲುವ, ಬೀಳುವ, ತೊಟ್ಟಿಕ್ಕುವ ನೀರು ಕೆಳಗಿನ ತೊಟ್ಟಿಯಲ್ಲಿ ಸಂಗ್ರಹವಾಗುತ್ತದೆ. ನೋಡಿ, ನೀರು ಕುಡಿದ ಹಲವರ ಬಾಯಲ್ಲಿ ಉದ್ಗಾರ. ‘ಇಷ್ಟು ಸುಲಭನಾ ಮಳೆ ನೀರ ಕೊಯಿಲು, ನೀರೆಷ್ಟು ಸಿಹಿಯಾಗಿದೆ’. ಹಲವರು ಈ ಪದ್ಧತಿಯನ್ನು ಅನುಸರಿಸುತ್ತಿರುವುದನ್ನು ನೋಡಿದಾಗ, ಮಾತಾಡುವುದಕ್ಕಿಂತ ಮಾಡಿ ತೋರಿಸುವುದು ಮೇಲು ಅನ್ನಿಸುತ್ತೆ ಅಂತಾರೆ ಗುರು ಪ್ರಸಾದ್.
ತೋಟ ಸುತ್ತಿ ಬಂದು ಮನೆಯ ಹತ್ತಿರ ಇರುವ ‘ಸೋಲಾರ್ ಕುಕ್ಕರ್’ ಒಳಗಿರುವ ‘ಅಸ್ತ್ರ ಒಲೆ’ ಬಯೋ ಗ್ಯಾಸ್ ನೋಡಿ ಬಂದು, ಒಂದು ಲೋಟ ನೀರು ಕುಡಿದರೆ ‘ಆಹಾ ಎಂಥ ರುಚಿ’ ಅಂತ ತನಗೆ ತಾನೇ ಬಾಯಲ್ಲಿ ಬರುತ್ತೆ. ಯಾತಕ್ಕೆ ಬರ ಬಂದರೂ ಕುಡಿಯುವ ನೀರಿಗೆ ಬರ ಬರಬಾರದಪ್ಪ ಅಂತಾರೆ ಈ ನೀರು ಕುಡಿದವರು. ಇದಕ್ಕಿಂತ ಸಾಕ್ಷಿ ಬೇಕೇ? ನೀರು ಪೋಲು ಮಾಡುವವರ ವಿರುದ್ಧ ಸಮರ ಸಾರಿದಾಗಲೇ, ಹನಿ ಹನಿ ನೀರನ್ನು ಸಂಗ್ರಹಿಸಿದಾಗಲೇ ಮೀನಾಕ್ಷಿ, ಪ್ರಸಾದ್ ಅವರ ಸಾಲಿಗೆ ನಾವೂ ಸೇರಬಹುದು. ಏನಂತೀರಿ?
ಲೇಖನ:
ಅನುಸೂಯ ಶರ್ಮ
ಚಿತ್ರಗಳು:
ಎ. ಆರ್. ಎಸ್. ಶರ್ಮ.

ಶಾಲಾಮಕ್ಕಳಿಂದ ಜಲಜಾಗೃತಿ

"ಅದು ನನ್ನ ನೀರಿನ ಟ್ಯಾಂಕ್. ಅದರಿಂದ ಏನು ಬೇಕಾದರೂ ಮಾಡಿಕೊಳ್ತೇನೆ. ಅದನ್ನು ಕೇಳಲಿಕ್ಕೆ ನೀವ್ಯಾರು?"
"ನಾನು ಯಾರಂತ ಗೊತ್ತುಂಟಾ? ನನ್ನ ಟ್ಯಾಂಕ್ ಮೊದಲು ಭರ್ತಿ ಆಗಬೇಕು. ಇಲ್ಲಾಂದ್ರೆ ನಿಮ್ಮ ಟ್ಯಾಂಕಿಗೆ ಬೆಂಕಿ ಕೊಡ್ತೇನೆ."
ಇದನ್ನು ಹೇಳಿದವರು ಯಾರು? ದೇಶದ ರಾಜಧಾನಿ ನವದೆಹಲಿಯ ಪ್ರಧಾನ ಪ್ರದೇಶವಾದ ವಸಂತಕುಂಜದ ನಿವಾಸಿಗಳು.
ಅವರು ಈ ಮಾತುಗಳನ್ನು ಹೇಳಿದ್ದು ಯಾರಿಗೆ? "ನಿಮ್ಮ ಟ್ಯಾಂಕಿನಿಂದ ನೀರು ಉಕ್ಕಿ ಹರಿದು ಪೋಲಾಗುತ್ತಿದೆ. ನಿಮ್ಮ ನೀರಿನ ಪಂಪ್ ಬಂದ್ ಮಾಡಿ" ಎಂದು ವಿನಂತಿಸಿದ ಶಾಲಾಮಕ್ಕಳಿಗೆ.
ಇದೆಲ್ಲದರ ಹಿನ್ನೆಲೆ ಏನು? ವಸಂತಕುಂಜ ಪ್ರದೇಶದ ನಿವಾಸಿಗಳಿಗೆ ಹಲವು ವರುಷಗಳಿಂದ ನೀರಿನ ಪರದಾಟ ತಪ್ಪಿಲ್ಲ. ಆದರೂ ಹಲವಾರು ಮನೆಗಳವರಿಗೆ ನೀರೆಂದರೆ ಅಸಡ್ಡೆ. ಉದಾಹರಣೆಗೆ ಪಂಪ್ ಚಾಲೂ ಮಾಡಿದರೆ ಓವರ್‍ಹೆಡ್ ಟ್ಯಾಂಕ್ ತುಂಬಿದೊಡನೆ ನಿಲ್ಲಿಸುತ್ತಿರಲಿಲ್ಲ. ಕುಡಿಯುವ ನೀರು ಗಂಟೆಗಟ್ಟಲೆ ಉಕ್ಕಿ ಹರಿದು ಪೋಲಾಗುತ್ತಿತ್ತು. ಎಪ್ರಿಲ್ ೨೦೦೯ರಲ್ಲಿ ಅಲ್ಲಿನ ಕೆಲವು ಶಾಲಾಮಕ್ಕಳು ಈ ಸಮಸ್ಯೆ ಕೈಗೆತ್ತಿಕೊಂಡರು. ೯೦೦ ಮನೆಗಳಿರುವ ತಮ್ಮ ಕಾಲೊನಿಯಲ್ಲಿ ಜಲಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಿದರು.  
ಮರುದಿನದಿಂದ ಪ್ರತಿ ದಿನ ಬೆಳಗ್ಗೆ ಕಾಲೊನಿಯಲ್ಲಿ ಈ ಶಾಲಾಮಕ್ಕಳ ಸಣ್ಣ ತಂಡಗಳ ದಂಡಯಾತ್ರೆ ಆರಂಭ. ಅದಕ್ಕಾಗಿ ದಿನದಿನವೂ ಆ ಕಾಲೊನಿಯ ಒಂದು ರಸ್ತೆಯ ಆಯ್ಕೆ. ಅಲ್ಲಿ ನಡೆದು ಹೋಗುವಾಗ, ಯಾವುದಾದರೂ ಮನೆಯ ಓವರ್‍ಹೆಡ್ ಟ್ಯಾಂಕಿನಿಂದ ನೀರು ಉಕ್ಕಿ ಹರಿಯುತ್ತಿದ್ದರೆ, ಆ ಮನೆಯ ಬಾಗಿಲು ತಟ್ಟುತ್ತಿದ್ದರು. ಮನೆಯವರೊಂದಿಗೆ "ನೀರಿನ ಕೊರತೆ ನಮ್ಮ ಕಾಲೊನಿಯ ಸಮಸ್ಯೆ. ನಿಮ್ಮ ಟ್ಯಾಂಕಿನಿಂದ ನೀರು ಪೋಲಾಗುತ್ತಿದೆ. ನಿಮ್ಮ ಪಂಪ್ ನಿಲ್ಲಿಸಿ" ಎಂದು ವಿನಂತಿಸುತ್ತಿದ್ದರು.
ತಮ್ಮ ಸಾಹಸದ ಬಗ್ಗೆ ಮದರ್ಸ್ ಇಂಟರ್‍ನ್ಯಾಷನಲ್ ಶಾಲೆಯ ೭ನೇ ತರಗತಿಯ ವಿದ್ಯಾರ್ಥಿ ಸಿದ್ಧಾರ್ಥ ವಾರ್‍ಷ್ನೇಯ ಹೇಳುತ್ತಾನೆ, "ಅವರಲ್ಲಿ ಕೆಲವರಿಗೆ ತಮ್ಮ ತಪ್ಪು ತಿಳಿಯುತ್ತಿತ್ತು. ಅವರು ತಕ್ಷಣವೇ ಪಂಪ್ ನಿಲ್ಲಿಸುತ್ತಿದ್ದರು. ಆದರೆ ಹಲವರು ನಮ್ಮನ್ನು ಗದರಿಸಿ, ರಪ್ಪನೆ ಬಾಗಿಲು ಮುಚ್ಚುತ್ತಿದ್ದರು."
ಅವನ ತಮ್ಮ ಕೌಸ್ತುಭನ ಅನುಭವ ಹೀಗಿದೆ: "ಬೇಸಗೆ ರಜೆಯಲ್ಲಿ ಪ್ರತಿ ದಿನ ಬೆಳಗ್ಗೆ ನಮ್ಮ ಜಲಜಾಗೃತಿ ಅಭಿಯಾನ. ಈಗ  ನಮ್ಮ ಶಾಲೆಗಳು ಪುನರಾರಂಭವಾಗಿವೆ. ಹಾಗಾಗಿ ನಾವೀಗ ಪ್ರತೀ ಭಾನುವಾರ ಹೋಗುತ್ತಿದ್ದೇವೆ. ನಾವು ವಿನಂತಿಸಿದ ನಂತರ ಹತ್ತು ಮನೆಯವರಾದರೂ ಸೋರುತ್ತಿದ್ದ ಟ್ಯಾಂಕ್ ರಿಪೇರಿ ಮಾಡಿಸಿದ್ದಾರೆ."
ತಮ್ಮ ಅನುಭವಗಳನ್ನು ಆಧರಿಸಿ, ಈ ಶಾಲಾಮಕ್ಕಳು ಜಲಜಾಗೃತಿ ಬಗ್ಗೆ ಒಂದು ಬೀದಿನಾಟಕವನ್ನೇ ರಚಿಸಿದ್ದಾರೆ. ಬಕೆಟ್‍ಗಳನ್ನು ಬಡಿಯುತ್ತಾ ಈ ಬೀದಿನಾಟಕದ ಪ್ರದರ್ಶನವನ್ನೂ ನಡೆಸುತ್ತಿದ್ದಾರೆ. ನಾಟಕದ ಮೊದಲ ಅಂಕದಲ್ಲಿ ಕಾಲೊನಿಯ ಜನರ ಪ್ರತಿಕ್ರಿಯೆಗಳ ಅಭಿನಯ. ಎರಡನೇ ಅಂಕದಲ್ಲಿ, ಒಂದು ವರುಷದ ಬಳಿದ ಒಂದು ಬಕೆಟ್ ನೀರಿಗಾಗಿ ಕಾಲೊನಿಯ ಜನರು ಜಗಳವಾಡುವ ದೃಶ್ಯ. ಕೊನೆಯ ಅಂಕದಲ್ಲಿ, ಮುಂದೊಂದು ದಿನ ನೀರಿಲ್ಲದೆ ಚಡಪಡಿಸುವ ಜನರು ಚಟಪಟನೆ ಸಾಯುವ ದೃಶ್ಯ.
ಈ ಶಾಲಾಮಕ್ಕಳಿಗೆ ಆರಂಭದಿಂದಲೂ ಮಾರ್ಗದರ್ಶನ ನೀಡಿದವರು "ನಿವಾಸಿಗಳ ಕ್ಷೇಮ ಸಂಘ"ದ ಉಪಾಧ್ಯಕ್ಷರಾದ ಅನುರಾಧ ಮೆಹ್‍ರೋತ್ರ. "ನಾವು ಜಲಜಾಗೃತಿ ಅಭಿಯಾನ ಆರಂಭಿಸಿದಾಗ ಇದ್ದವರು ಕೇವಲ ಐದು ಮಕ್ಕಳು. ಈಗ ಈ ತಂಡದಲ್ಲಿ ಇಪ್ಪತ್ತು ಶಾಲಾಮಕ್ಕಳಿದ್ದಾರೆ. ನಾವು ಹಿರಿಯರು ಮನೆಮನೆಗೆ ಹೋಗಿ ವಿನಂತಿಸಿದಾಗ ಮನೆಯವರು ರೇಗುತ್ತಿದ್ದರು. ಆದರೆ ಶಾಲಾಮಕ್ಕಳು ವಿನಂತಿಸಿದಾಗ ಸ್ಪಂದಿಸುತ್ತಿದ್ದಾರೆ’, ಎನ್ನುತ್ತಾರೆ ಅವರು.
ಅಂದ ಹಾಗೆ ಜಲಜಾಗೃತಿ ಅಭಿಯಾನದ ಶಾಲಾಮಕ್ಕಳ ತಂಡದ ಹೆಸರು "ಟ್ಯಾಂಕಿ ಟ್ರೂಪರ್ಸ್".  ಆ ತಂಡದ ಸದಸ್ಯರೆಲ್ಲರೂ ಈಗ ಜಲಯೋಧರು. ನಿಮ್ಮ ಊರಿನಲ್ಲಿ ಜಲಜಾಗೃತಿಗಾಗಿ ಇಂತಹ ಶಾಲಾಮಕ್ಕಳ ಜಲಯೋಧರ ಸೈನ್ಯ ಕಟ್ಟುವಿರಾ?
- ಅಡ್ಡೂರು ಕೃಷ್ಣ ರಾವ್ 

ಗಣಪ ಬಂದ....


ಸಾಹಸಿ ವಿನಾಯಕ


ನೀರಿನ ವ್ಯಾಪಾರಿ