ಸಾಮಾನ್ಯ ಗಾರೆ ಕೆಲಸದ ಮೇಸ್ತ್ರಿಗೆ ಕಾಲೇಜಿನಲ್ಲಿ ಕಲಿತು ಡಿಗ್ರಿ ಪಡೆದುಕೊಂಡವರಿಗಿಂತ ಚೆನ್ನಾಗಿ ಗಣಿತ ಗೊತ್ತಿರುತ್ತದೆ. ಆದರೆ ಓದು, ಬರೆಹ ಅಂದರೆ ಜನ ಹಿಂದೆ ಸರಿಯುತ್ತಿರುವುದೇಕೆ? ಪತ್ರಿಕೆಗಳು, ಶಿಕ್ಷಣ ವ್ಯವಸ್ಥೆ ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತವನ್ನು ಕಬ್ಬಿಣದ ಕಡಲೆ ಎಂದು ಬಿಂಬಿಸಿದ್ದರ ಪಡಿಣಾಮ ಇದು. ಇಂಥ ಭ್ರಮೆಯನ್ನು ಹೋಗಲಾಡಿಸಲು ಮರಾಠಿಯ ಮಾಸಿಕ `ಸೃಷ್ಟಿಜ್ಞಾನ'ದ ಸಾಧನೆಯನ್ನು ವಿವರಿಸಿ ಹೇಳಬೇಕು...
ವಿಜ್ಞಾನ, ಗಣಿತ ಎಂದರೆ ಸಾಕು ಮಾರು ದೂರ ಹೋಗುತ್ತೇವೆ. ಅಷ್ಟಿದ್ದರೂ ಕೂಡ ಕಬ್ಬಿಣದ ಕಡಲೆ ಎಂದೇ ಪರಿಗಣಿತವಾದ ವಿಜ್ಞಾನ ಮತ್ತು ಗಣಿತವನ್ನು ನಿತ್ಯ ಜೀವನದಲ್ಲಿ ಅರಿವಿಲ್ಲದೆಯೇ ಬಳಸಿಕೊಳ್ಳುತ್ತೇವೆ. ಸಾಮಾನ್ಯ ಗಾರೆ ಕೆಲಸದ ಮೇಸ್ತ್ರಿಗೆ ಕಾಲೇಜಿನಲ್ಲಿ ಕಲಿತು ಡಿಗ್ರಿ ಪಡೆದುಕೊಂಡವರಿಗಿಂತ ಚೆನ್ನಾಗಿ ಗಣಿತ ಗೊತ್ತಿರುತ್ತದೆ. ಇದು ವಾಸ್ತವ ಆದರೆ ಎಷ್ಟೇ ಚೆನ್ನಾಗಿ ಲೆಕ್ಕಗಳನ್ನು ಮಾಡಲು ಗೊತ್ತಿದ್ದರೂ, ವಿಜ್ಞಾನದ ವಿಚಾರಗಳ ಬಗ್ಗೆಯೇ ನಿರರ್ಗಳವಾಗಿ ಮಾತಾಡುವುದಕ್ಕೆ ಸಾಧ್ಯವಿದ್ದರೂ ವಿಜ್ಞಾನದ ಓದು, ಬರೆಹ ಅಂದರೆ ಜನ ಹಿಂದೆ ಸರಿಯುತ್ತಿರುವುದೇಕೆ?
ಪತ್ರಿಕೆಗಳು, ಶಿಕ್ಷಣ ವ್ಯವಸ್ಥೆ ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತವನ್ನು ಕಬ್ಬಿಣದ ಕಡಲೆ ಎಂದು ಬಿಂಬಿಸಿದ್ದರ ಪಡಿಣಾಮ ಇದು. ಎಷ್ಟೋ ಪತ್ರಿಕೆಗಳನ್ನು, ಪತ್ರಕರ್ತರನ್ನು ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತದ ಬಗ್ಗೆ ಕೇಳಿ ನೋಡಿ- `ಅದೆಲ್ಲಾ ಯಾರಿಗೆ ಅರ್ಥವಾಗುತ್ತೆ? ಜನ ಅದನ್ನೆಲ್ಲ ಅರ್ಥ ಮಾಡಿಕೊಳ್ಳುವಷ್ಟು ಶಕ್ತರಲ್ಲ. ವಿಜ್ಞಾನ ಲೇಖನಗಳನ್ನು ಓದುವವರೂ ಇಲ್ಲ' ಎಂಬ ಉತ್ತರ ಸಿಗುವುದು ಶತಃಸಿದ್ಧ! ಹಾಗಂತ ಜನ ವಿಜ್ಞಾನವನ್ನು ಓದುವುದೇ ಇಲ್ಲವೇ ಎಂದು ಮರುಪ್ರಶ್ನೆ ಮಾಡಿದಿರಿ ಎಂದಾದರೆ ಯಾವ ಚಿಂತನೆ, ಅಧ್ಯಯನವೂ ಇಲ್ಲದೆ `ಜನರಿಗೆ ವಿಜ್ಞಾನ ಎಂದರೆ ಆಗೋದೇ ಇಲ್ಲ' ಎಂದುಬಿಡುತ್ತಾರೆ. ಜನರು ವಿಜ್ಞಾನವನ್ನು ಎಷ್ಟರ ಮಟ್ಟಿಗೆ ಇಷ್ಟಪಡುತ್ತಾರೆ, ವೈಜ್ಞಾನಿಕ ಬರಹಗಳನ್ನು ಓದುತ್ತಾರೆ ಎಂಬುದನ್ನು ಬಹುಶಃ ಯಾವ ಮಾಧ್ಯಮದವರೂ ಯೋಚನೆ ಮಾಡುವುದಕ್ಕೇ ಹೋಗುವುದಿಲ್ಲ. ವಿಜ್ಞಾನವನ್ನು ಏನಿದ್ದರೂ ಇಂಗ್ಲಿಷಿನಲ್ಲಿಯೇ ಓದಬೇಕು, ಆಗಲೇ ಅದು ಅರ್ಥ ಆಗೋದು. ಕನ್ನಡದಲ್ಲಿ ವಿಜ್ಞಾನವನ್ನು ಅರ್ಥ ಮಾಡಿಸುವುದಕ್ಕೆ ಸಾಧ್ಯವೂ ಇಲ್ಲ ಎಂಬ ಪೂರ್ವಾಗ್ರಹಪೀಡಿತ ಉತ್ತರ ಜೊತೆಗೇ ಇರುತ್ತದೆ. ಅದೇ ಕಾರಣಕ್ಕೆ ಕನ್ನಡದಲ್ಲಿ ವೈಜ್ಞಾನಿಕ ನಿಯತಕಾಲಿಕೆಗಳೂ ಗಮನ ಸೆಳೆದಿಲ್ಲ. ಬಹುತೇಕ ವೃತ್ತಪತ್ರಿಕೆಗಳು ಕೂಡಾ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೇಳಿಕೊಳ್ಳುವಂಥ ಮಹತ್ವವನ್ನೇನೂ ಕೊಟ್ಟಿಲ್ಲ.
ಈ ವಿಚಾರಗಳೆಲ್ಲ ಒತ್ತಟ್ಟಿಗಿರಲಿ. ಕನ್ನಡ ಅಥವಾ ಇನ್ಯಾವುದೇ ಪ್ರಾದೇಶಿಕ ಭಾಷೆಗಳಲ್ಲಿ ವಿಜ್ಞಾನದ ಲೇಖನಗಳನ್ನು ಬರೆದು ಜನರಿಗೆ ಅರ್ಥ ಮಾಡಿಸುವುದಕ್ಕೆ ಸಾಧ್ಯವಿಲ್ಲ ಒಂದು ಹೇಳುವವರ ಮುಂದೆ ಮರಾಠಿಯ ಮಾಸಿಕ `ಸೃಷ್ಟಿಜ್ಞಾನ'ದ ಪ್ರತಿಯನ್ನು ಇಡಿ. ಪ್ರಾದೇಶಿಕ ಭಾಷೆಯಾದ ಮರಾಠಿಯಲ್ಲಿ ಕೇವಲ ವಿಜ್ಞಾನ ಮತ್ತು ತಂತ್ರಜ್ಞಾನದ ಲೇಖನಗಳನ್ನು ಕೊಟ್ಟರೆ ಜನ ಓದುತ್ತಾರೋ ಇಲ್ಲವೋ ಎಂಬುದಕ್ಕೆ ಈ ಮಾಸಿಕವೇ ಸಾಕ್ಷಿ. ಈ ಮಾಸಿಕ 84 ವರ್ಷಗಳಿಂದ ಮರಾಠಿಗರಿಗೆ ಅವರದ್ದೇ ಮಾತೃಭಾಷೆಯಲ್ಲಿ ವಿಜ್ಞಾನದ ರಸದೌತಣವನ್ನು ನೀಡುತ್ತಿದೆ. ಅಂದಹಾಗೆ, ಇದೇ ವಾರ ಅಂದರೆ ಜುಲೈ 22ನೇ ತಾರೀಕಿನಂದು ಈ ಮಾಸಿಕದ 1000ನೇ ಸಂಚಿಕೆ ಹೊರಬರುತ್ತಿದೆ. ತಕ್ಕಮಟ್ಟಿಗೆ ಉತ್ತಮ ಪ್ರಸಾರವನ್ನೇ ಹೊಂದಿದೆ. ಈ ಮಾಸಿಕದ ಇತಿಹಾಸವನ್ನು, ಅದರ ಬಗ್ಗೆ ಜನರಿಗಿರುವ ಪ್ರೇಮವನ್ನು ಗಮನಿಸಿದರೆ ನಮ್ಮ ಕನ್ನಡದಲ್ಲಿ ಇಂಥದ್ದೊಂದು ಪ್ರಯತ್ನ ನಡೆದೇ ಇಲ್ಲವಲ್ಲ ಎಂಬ ನೋವು ಕಾಡುತ್ತದೆ. ಯಾವುದಕ್ಕೂ `ಸೃಷ್ಟಿಜ್ಞಾನ'ದ ಅಂತರಾಳವನ್ನು ಅರಿತುಕೊಳ್ಳಲೇಬೇಕು.
ಸೃಷ್ಟಿಯನ್ನೇ ಧ್ಯಾನಿಸಿದರು
ಆವರು ಜಿ.ಆರ್. ಪರಾಂಜಪೆ, ಮುಂಬೈನ ಇನ್ ಸ್ಟಿಸ್ಯೂಟ್ ಆಫ್ ಸೈನ್ಸ್ನಲ್ಲಿ (ಅಂದಿನ ರಾಯಲ್ ಇನ್ ಸ್ಟಿಸ್ಯೂಟ್ ಆಫ್ ಸೈನ್ಸ್) ಭೌತಶಾಸ್ತ್ರದ ಉಪನ್ಯಾಸಕರಾಗಿದ್ದವರು. ಇದು ಮೊದಲ ಮಹಾಯುದ್ಧಕ್ಕೂ ಮೊದಲಿನ ಕಥೆ. ಪರಾಂಜಪೆ ಉನ್ನತ ಶಿಕ್ಷಣ ಪಡೆಯಬೇಕೆಂದು ಜರ್ಮನಿಗೆ ತೆರಳಿದ್ದರು. ಐರೋಪ್ಯ ರಾಷ್ಟ್ರಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯನ್ನು ಮತ್ತು ಅದನ್ನು ಅಲ್ಲಿನ ಜನ ಆಸ್ವಾದಿಸುವುದನ್ನು ಕಂಡು ಅಚ್ಚರಿಗೊಳಗಾಗಿದ್ದರು. ಅಲ್ಲಿ ವಿಜ್ಞಾನವನ್ನು ಇವರೂ ಆಸ್ವಾದಿಸಿದರು. ಸೃಷ್ಟಿಯನ್ನೇ ಧ್ಯಾನಿಸಿದರು. `ಓಹ್! ನಮ್ಮ ಮರಾಠಿಗರಿಗೂ ವಿಜ್ಞಾನದ ರಸದೌತಣ ಕೊಡುವಂಥ ಭಾಗ್ಯ ಸಿಕ್ಕಿದರೆ?' ಎಂಬ ಭಾವನೆಗಳ ತರಂಗ ಅವರ ಹೃದಯವನ್ನಾವರಿಸಿತು. ಅದೇ ಕಾಲಕ್ಕೆ ಮೊದಲ ಮಹಾಯುದ್ಧ ಶುರುವಾಯಿತು. ಬ್ರಿಟಿಷ್ ಆಳ್ವಿಕೆಯಿರುವ ಎಲ್ಲ ದೇಶಗಳ ಪ್ರಜೆಗಳನ್ನೂ ಜರ್ಮನಿಯಿಂದ ಹೊರಗಟ್ಟಲಾಯಿತು, ಪರಾಂಜಪೆ ತವರಿಗೆ ವಾಪಸಾದರು. ಬಂದ ಮೇಲೆ ಏನು ಮಾಡಬೇಕೆಂಬ ಕಲ್ಪನೆ ಆಗಲೇ ಅವರ ಮನಸ್ಸಿನಲ್ಲಿ ಸ್ಪಷ್ಟ ರೂಪವನ್ನು ಪಡೆದಿತ್ತು.
ಹೀಗೆ ತವರಿಗೆ ವಾಪಸಾದವರೇ ಮರಾಠಿಗರಿಗಾಗಿ `ಸೃಷ್ಟಿಜ್ಞಾನ'ವನ್ನು ಶುರು ಮಾಡಿದರು. ಮೊದಲ ಸಂಚಿಕೆ ಹೊರಬಂದದ್ದು 1928ರ ಜನವರಿ 1ರಂದು. ಮೊದಲ ಸಂಚಿಕೆಯ ಸಂಪಾದಕೀಯದಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿನ ವೈಜ್ಞಾನಿಕ ಪ್ರಗತಿಯ ವೇಗವನ್ನೇ ಮರಾಠಿಗರಿಗೆ ವಿವರಿಸಿದರು. ಅಲ್ಲಿಂದ ಶುರುವಾದ ಅಭಿಯಾನ ಇನ್ನೂ ಮುಂದುವರಿದೆ. 90ರ ದಶಕದಲ್ಲಿ ಮಾಧ್ಯಮ ರಂಗವನ್ನೇ ಟಿವಿ ಆವರಿಸಿಕೊಂಡಾಗ, ಪತ್ರಿಕೆ ಓದುತ್ತಿದ್ದ ಜನರೆಲ್ಲ ಟಿವಿ ನೋಡುವುದಕ್ಕೆ ಶುರು ಮಾಡಿದಾಗ ಬಹುತೇಕ ನಿಯತಕಾಲಿಕೆಗಳು ಮುಚ್ಚಲ್ಪಟ್ಟವು. `ಸೃಷ್ಟಿಜ್ಞಾನ' ಮಾತ್ರ ಪ್ರಸಾರ ಸ್ಥಗಿತಗೊಳಿಸುವ ಯೋಚನೆ ಮಾಡಲಿಲ್ಲ. ಇದರಿಂದಾಗಿಯೇ ಇಂದು ಈ ಮಾಸಿಕ 1000ನೇ ಸಂಚಿಕೆಯನ್ನು ನೋಡುವಂತಾಗಿದೆ. ಜಗತ್ತಿನ ಯಾವುದೇ ಮಾಸಿಕವೂ ಕಾಣುವುದು ಕಷ್ಟವಾದಂಥ ಸಾಧನೆಯಿದು. ಮರಾಠಿ ಓದುಗರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಮಾಹಿತಿಯನ್ನು ಒದಗಿಸುತ್ತಾ ಬಂದಿರುವ `ಸೃಷ್ಟಿಜ್ಞಾನ' ತನ್ನ ಪ್ರಸಾರವನ್ನು ಹೆಚ್ಚಿಸುವ ಕಸರತ್ತು ಮಾಡದೇ ಇರಬಹುದು. ಆದರೆ ತನ್ನ ಓದುಗರ ವಿಜ್ಞಾನದ ದಾಹವನ್ನು ನೀಗಿಸಿ ವಿಜ್ಞಾನದಲ್ಲೇ ಅವರು ಧ್ಯಾನಸ್ಥರಾಗುವಂತೆ ಮಾಡಿದ್ದಂತೂ ನಿಜ.
ಕನ್ನಡದಲ್ಲಿ ಯಾಕಿಲ್ಲ?
`ಸೃಷ್ಟಿಜ್ಞಾನ'ದ ಪ್ರಯತ್ನವನ್ನು ನೋಡಿದರೆ ನಮ್ಮ ಕನ್ನಡದಲ್ಲೂ ಇಂಥದ್ದೊಂದು ಪತ್ರಿಕೆ ಬೇಕಿತ್ತು ಎನಿಸುತ್ತದೆ. ನಮ್ಮಲ್ಲಿ ಇಚ್ಛಾಶಕ್ತಿಯ ಕೊರತೆಯಿದೆ. ವಿಜ್ಞಾನವೆಂದರೆ ಕಷ್ಟದ ವಿಚಾರ ಎಂದು ಭಾವಿಸಿದ್ದೇವೆ. ಶಾಲೆ, ಕಾಲೇಜುಗಳಲ್ಲಿ ವಿಜ್ಞಾನವಿದ್ದರೂ ಅದು ಕೇವಲ ಪಠ್ಯ ಎಂಬ ದೃಷ್ಟಿಯಿಂದ ನೋಡುತ್ತೇವೆಯೇ ಹೊರತು; ಅದು ಜೀವನದ ಅವಿಭಾಜ್ಯ ಅಂಗ ಒಂದು ಭಾವಿಸುವುದಿಲ್ಲ. ಹಾಗೆ ನೋಡಿದರೆ ನಮ್ಮ ಜೀವನದ ಪ್ರತಿಯೊಂದು ಕ್ಷಣವೂ ವಿಜ್ಞಾನವೇ. ನಾವು ಮಾಡುವ ಪ್ರತಿಯೊಂದು ಕೆಲಸದ ಹಿಂದೆಯೂ ವಿಜ್ಞಾನವಿದೆ. ಹೀಗಾಗಿಯೇ ನಮ್ಮ ವೇದಗಳಲ್ಲಿ, ಉಪನಿಷತ್ತುಗಳಲ್ಲಿ, ಪುರಾಣಗಳಲ್ಲಿ ವಿಜ್ಞಾನವನ್ನು ನಮ್ಮ ಜೀವನವೆಂದೇ ಪರಿಗಣಿಸಿರುವುದು ಮತ್ತು ಇವುಗಳಲ್ಲಿ ಉಲ್ಲೇಖಗೊಂಡಿರುವ ಮಂತ್ರಗಳು, ಶ್ಲೋಕಗಳು ಎಲ್ಲವೂ ವಿಜ್ಞಾನವೇ ಆಗಿರುವುದು.
ಇವುಗಳಲ್ಲೆಲ್ಲ ಪ್ರಕೃತಿಯ ಒಂದೊಂದು ಭಾಗವನ್ನೂ ದೇವತೆಗಳೆಂದೇ ಹೆಸರಿಸಿ ಅವುಗಳನ್ನು ಉಪಾಸಿಸಬೇಕೆಂದರು, ಅನುಷ್ಠಾನ ಮಾಡಬೇಕೆಂದರು. ಅಂದರೆ ಪ್ರಕೃತಿಯನ್ನು ಸಂರಕ್ಷಿಸಬೇಕೆಂಬುದು ಅದರ ಅರ್ಥ. ನಾವು ಮಾತ್ರ ಅನುಷ್ಠಾನ ಎಂಬುದನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಪ್ರಕೃತಿಯನ್ನೆಲ್ಲ ಹಾಳುಗೆಡವಿ ದೇವಸ್ಥಾನಕ್ಕೆ ಹೋದ ತಕ್ಷಣ ಪಾಪವೆಲ್ಲ ಕಳೆದು ಹೋಯಿತು ಎಂದು ಭಾವಿಸುತ್ತೇವೆ. ಪ್ರಕೃತಿಯನ್ನು ಹೇಗೆ ರಕ್ಷಿಸಬೇಕು ಎಂಬುದಕ್ಕೆ ಇದೊಂದೇ ಮಂತ್ರ ಸಾಕು- ಶಂ ನೋ ಮಿತ್ರಃ ಶಂ ವರುಣಃ| ಶಂ ನೋ ಭವತ್ವರ್ಯಮಾ| ಶಂ ನ ಇಂದ್ರೋ ಬೃಹಸ್ಪತಿಃ| ಶಂ ನೋ ವಿಷ್ಣುರುರುಕ್ರಮಃ|| ನಮೋ ಬ್ರಹ್ಮಣೇ| ನಮಸ್ತೇ ವಾಯೋ| ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ| ತ್ವಮೇವ ಪ್ರತ್ಯಕ್ಷಂ ಬ್ರಹ್ಮ ವದಿಷ್ಯಾಮಿ| ಋತಂ ವದಿಷ್ಯಾಮಿ| ಸತ್ಯಂ ವದಿಷ್ಯಾಮಿ| ತನ್ಮಾಮವತು| ತದ್ವಕ್ತಾರಮವತು| ಅವತುಮಾಂ| ಅವತು ವಕ್ತಾರಂ|
ಇಲ್ಲಿ ಪ್ರತಿಯೊಂದು ಅಕ್ಷರಗಳಲ್ಲಿಯೂ ನಮ್ಮನ್ನು ರಕ್ಷಿಸು ಎಂಬ ಕೂಗು ಕೇಳುತ್ತದೆ, ಪರಬ್ರಹ್ಮ ಸ್ವರೂಪಿಯಾದ ವಾಯುವನ್ನು ಪ್ರಾರ್ಥಿಸುವುದಿದು. ವಾಯು ನಮ್ಮನ್ನು ರಕ್ಷಿಸಬೇಕು ಎಂದಾದರೆ ಅದು ಶುದ್ಧವಾಗಿರಬೇಕು. ಅಂಥ ರಕ್ಷಕನನ್ನೇ ನಾವು ಆಶುದ್ಧ ಮಾಡಿದರೆ?
No comments:
Post a Comment