Sunday, 21 August 2011
Saturday, 20 August 2011
ಮಗುವಿನ ಹಕ್ಕುಗಳು
ಭಾರತದಲ್ಲಿನ 300 ದಶಲಕ್ಷ ಮಕ್ಕಳಲ್ಲಿ ಬಹುತೇಕ ಮಕ್ಕಳು ತಮ್ಮ ಶಾರೀರಕ ಹಾಗೂ ಬೌದ್ಧಿಕ ಅಭಿವೃದ್ಧಿಗೆ ತಡೆಯೊಡ್ಡುವ ಸಾಮಾಜಿಕ ಮತ್ತು ಆರ್ಥಿಕ ಪರಿಸರದಲ್ಲಿ ಜೀವಿಸುತ್ತಿದ್ದಾರೆ ಎಂಬುದು ವಾಸ್ತವ. ಭವಿಷ್ಯದ ವಿಚಾರಪೂರಿತ, ಸದೃಢ ಭಾರತವನ್ನು ನಿರ್ಮಾಣ ಮಾಡಲು ಮಕ್ಕಳ ಇಂತಹ ಅಗತ್ಯಗಳಿಗೆ ಸ್ಪಂದಿಸಲು ನಾವೆಲ್ಲಾ ಸಿದ್ಧರಾಗಬೇಕಾದುದು ಸದ್ಯದ ಆವಶ್ಯಕತೆಯಾಗಿದೆ.
ಭಾರತದಲ್ಲಿ ಸ್ವಾತಂತ್ರ್ಯೋತ್ತರ ದಶಕಗಳು ಮಕ್ಕಳ ಅಗತ್ಯಗಳ ಸಂವೈಧಾನಿಕ ನೀಡಿಕೆಗಳು, ನೀತಿಗಳು, ಕಾರ್ಯಕ್ರಮಗಳು ಮತ್ತು ಕಾಯಿದೆ ರಚನೆಗಳ ಮೂಲಕ ಸರ್ಕಾರದ ಬದ್ಧತೆಯ ಸ್ಪಷ್ಟ ಅಭಿವ್ಯಕ್ತಿಯನ್ನು ಕಂಡಿದೆ. ಈ ಶತಮಾನದ ಹಿಂದಿನ ದಶಕದಲ್ಲಿ ನಾಟಕೀಯ ತಾಂತ್ರಿಕ ಅಭಿವೃದ್ದಿಯು, ಮಕ್ಕಳನ್ನು ಉದ್ದೇಶಿಸಿದ, ಆರೋಗ್ಯ, ಪೌಷ್ಟಿಕಾಂಶ, ಶಿಕ್ಷಣ ಮತ್ತು ಇತರ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅವಕಾಶಗಳ ನವೀನ ಆಯಾಮವನ್ನೇ ತೆರೆದಿಟ್ಟಿದೆ.
ಭಾರತದಲ್ಲಿ, ಮಕ್ಕಳನ್ನೇ ಉದ್ದೇಶಿಸಿದ, ಅವರ ಸಮಸ್ಯೆಗಳಿಗೆ ಗಮನ ಕೇಂದ್ರೀಕರಿಸಿದ ಕಾರ್ಯಗಳಿಗಾಗಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳೆಲ್ಲಾ ಈಗ ಕೈಜೋಡಿಸಿವೆ. ಇದರಲ್ಲಿ ಮಕ್ಕಳು ಮತ್ತು ದುಡಿಮೆಗೆ ಸಂಬಂಧಿಸಿದ ವಿಷಯಗಳು, ಬಾಲದುಡಿಮೆಯ ಸವಾಲುಗಳನ್ನು ಪರಿಹರಿಸುವುದು, ಹೆಣ್ಣು ಶಿಶುವಿಗೆ ತೋರುವ ತಾರತಮ್ಯದ ನಿವಾರಣೆ, ಬೀದಿ ಮಕ್ಕಳನ್ನು ಮೇಲೆತ್ತುವುದು, ವಿಕಲ ಚೇತನ ಮಕ್ಕಳ ವಿಶೇಷ ಅಗತ್ಯಗಳನ್ನು ಗುರುತಿಸಿ ಪೂರೈಸುವುದು ಮತ್ತು ಅವರ ಮೂಲಭೂತ ಹಕ್ಕಾದ ಶಿಕ್ಷಣವು ಪ್ರತೀ ಮಗುವಿಗೆ ಪೂರೈಕೆಯಾಗುವಂತೆ ನೋಡಿಕೊಳ್ಳುವುದು, ಇದೆಲ್ಲಾ ಸೇರಿವೆ.
ಮೊಲದ ಮರಿ... ಮೊಲದ ಮರಿ...
ಮೊಲದ ಮರಿ ಮೊಲದ ಮರಿ
ಆಡು ಬಾರೇ..
ಚುಪುಕೆ ಚುಪುಕೆ ಚುಪುಕೆ ಚುಪುಕೆ
ನೆಗೆದು ಬಾರೆ
ದೊಡ್ಡದಾದ ಕಾಡಿನೊಳಗೆ
ಏನು ಮಾಡುವೆ
ಹೆಡ್ಡ ನೀನು ಪೊದರಿನೊಳಗೆ
ಏಕೆ ಅಡಗುವೆ?
ಪೊದರಿನಿಂದ ಪೊದರ ಬಳಿಗೆ
ನಿನ್ನ ಆಟ
ಗಿಡದ ಚಿಗುರು ನಿತ್ಯ ನಿನಗೆ
ಸೊಗಸಿನೂಟ
ಗಿಡ್ಡ ಬಾಲ ದೊಡ್ದ ಕಿವಿಯು
ನಿನಗೆ ಚೆಂದ
ಎದ್ದು ಎನ್ನ ಬಳಿಗೆ ಬಂದು
ಆಡೊ ಕಂದ
ಗೂಡು ಕಟ್ಟಿತಿಂಡಿ ಕೊಡುವೆ
ಪ್ರೀತಿಯಿಂದ
ಕಾಡಬಿಟ್ಟು ಊರ ಸೇರೋ
ಮೊಲದ ಕಂದಾ
ಮುದ್ದು ಮುದ್ದು ಮಾತುಗಳನು
ನಿನಗೆ ಕಲಿಸುವೇ
ಮುದ್ದು ಮಾಡಿ ಪ್ರೀತಿಯಿಂದ
ನಿನ್ನ ಸಲಹುವೇ
**********
ಚಿಂವ್ ಚಿಂವ್ ಗುಬ್ಬಿ...

ಗುಬ್ಬಿ ಗುಬ್ಬಿ
ಚಿಂವ್ ಚಿಂವ್
ಎಂದು ಕರೆಯುವೆ ಯಾರನ್ನು?
ಆಚೆ ಈಚೆ
ಹೊರಳಿಸಿ ಕಣ್ಣು
ನೋಡುವೆ ಏನನ್ನು?
ಮೇಲೆ ಕೆಳಗೆ
ಕೊಂಕಿಸಿ ಕೊರಳನು
ಹುಡುಕುವೆ ಏನಲ್ಲಿ?
ಕಾಳನು ಹುಡುಕುತ
ನೀರನು ನೋಡುತ
ಅಲೆಯುವೆ ಏಕಿಲ್ಲಿ?
ಕಾಳನು ಕೊಟ್ಟು
ನೀರನು ಕುಡಿಸುವೆ
ಆಡಲು ಬಾ ಇಲ್ಲಿ
ಹಣ್ಣನು ಕೊಟ್ಟು
ಹಾಲನು ನೀಡುವೆ
ನಲಿಯಲು ಬಾ ಇಲ್ಲಿ
ಪುಣ್ಯಕೋಟಿ ಎಂಬ ಗೋವಿನ ಹಾಡು
ಧರಣಿ ಮಂಡಲ ಮಧ್ಯದೊಳಗೆ
ಮೆರೆಯುವುದೈವತ್ತಾರು ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನು
ಪರಿಯ ನಾನೆಂತು ಪೇಳ್ವೆನು.
ಗಿರಿಗಳೆಡೆಯಲಿ ಅಡವಿ ನಡುವೆ
ತುರುವ ದೊಡ್ಡಿಯ ಮಾಡಿಕೋಂಡು
ಮೆರೆವ ಕಾಳಿಂಗನೆಂಬ ಗೊಲ್ಲನ
ಸಿರಿಯ ನಾನೆಂತು ಪೇಳ್ವೆನು.
ಗೊಲ್ಲದೊಡ್ಡಿಯೊಳಿರುವ ಹಸುಗಳು
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲನೊಳ್ಳೆಯ ನೀರ ಕುಡಿಯುತ
ಅಲ್ಲಿ ಮೆರೆದುವರಣ್ಯದಿ.
ಕರುಗಳನು ನೆನೆನೆನೆದು ಹಸುಗಳು
ಕೊರಳ ಘಂಟೆ ಢಣಿರು ಢಣಿರನೆ
ಪರಿದು ಲಂಘ್ಹಿಸಿ ಚಿಮ್ಮಿ ನೆಗೆಯುತ
ಮರಳಿ ಬಂದವು ದೊಡ್ಡಿಗೆ.
ತಮ್ಮ ತಾಯನು ಕಂಡು ಕರುಗಳು
ಅಮ್ಮಾ ಎಂದು ಕೂಗಿ ನಲಿಯುತ
ಸುಮ್ಮಾನದೊಳು ಮೊಲೆಯನುಂಡು
ನಿರ್ಮಲದೊಳು ಇದ್ದವು.
ಉದಯ ಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚದುರ ಶಿಖೆಯನು ಹಾಕಿದ.
ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲಗೌಡನು
ಬಳಸಿ ಬರುವ ತುರುಗಳನ್ನು
ಬಳಿಗೆ ಕರೆದನು ಹರುಷದಿ.
ಗಂಗೆ ಬಾರೇ ಗೌರಿ ಬಾರೇ
ತುಂಗಭದ್ರೆ ನೀನು ಬಾರೇ
ಕಾಮಧೇನು ನೀನು ಬಾರೆಂದು
ಪ್ರೇಮದಲಿ ಗೊಲ್ಲ ಕರೆದನು.
ಗೊಲ್ಲ ಕರೆದಾ ಧ್ವನಿಯ ಕೇಳಿ
ಎಲ್ಲ ಪಶುಗಳು ಬಂದುವಾಗ
ಚೆಲ್ಲಿ ಸೂಸಿ ಪಾಲ ಕರೆದು
ಅಲ್ಲಿ ತುಂಬಿತು ಬಿಂದಿಗೆ.
ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಬುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿ ಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು.
ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚೆದರಿ ಹೋದವು ಹಸುಗಳು.
ಪುಣ್ಯಕೋಟಿ ಎಂಬ ಗೋವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ.
ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು.
ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿ ಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು.
ಒಂದು ಬಿನ್ನಹ ಹುಲಿಯೆ ಕೇಳೈ
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ.
ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆಯೆಂದಿತು.
ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು.
ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆಯಿತ್ತು
ಕಂದನಿನ್ನನು ನೋಡಿ ಹೋಗುವೆ
ನೆಂದು ಬಂದೆನೆ ದೊಡ್ಡಿಗೆ.
ಅಮ್ಮ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಅಮ್ಮನಿಗೆ ಕರು ಹೇಳಲು.
ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ.
ಆರ ಮೊಲೆಯನು ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರು ನನಗೆ ಹಿತವರು.
ಅಮ್ಮಗಳಿರ ಅಕ್ಕಗಳಿರ
ನಮ್ಮ ತಾಯೊಡಹುಟ್ಟುಗಳಿರ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿಯನೀ ಕರುವನು.
ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು.
ಕಟ್ಟ ಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗ ಬೇಡ
ದುಷ್ತವ್ಯಾಘ್ರನು ಹೊಂಚುತಿರುವನು
ನಟ್ಟನಡುವಿರು ಕಂದನೆ.
ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ರುಣ ತೀರಿತೆಂದು
ತಬ್ಬಿ ಕೊಂಡಿತು ಕಂದನ.
ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು.
ಖಂಡವಿದೆ ಕೋ ಮಾಂಸವಿದೆ ಕೋ
ಗುಂಡಿಗೆಯ ಬಿಸಿ ರಕ್ತವಿದೆಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು.
ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು.
ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು.
Subscribe to:
Posts (Atom)