Sunday, 15 May 2011

ಭಾರತೀಯ ಹಬ್ಬಗಳು

ದಸರಾ ಉತ್ಸವಗಳು

 ನಮ್ಮ ದೇಶದಲ್ಲಿ ಹೆಚ್ಚೂ ಕಡಿಮೆ ಎಲ್ಲ ಪ್ರಾಂತ್ಯಗಳಲ್ಲೂ ಆಟಪಾಠಗಳೊಡನೆ, ಅಲಂಕರಿಸಿ ಕೊಂಡು, ಆನಂದೋತ್ಸಾಹದಿಂದ ನಡೆಸುವ ಹಬ್ಬ ಎಂದರೆ ದಸರಾ. ಇದು ಆಶ್ವಯುಜ ಮಾಸದಲ್ಲಿ ಬರುತ್ತದೆ. ದುರ್ಗಾ ದೇವಿಯು ಲೋಕಕಂಟಕನಾದ ಮಹಿಷಾಸುರನನ್ನು ಸಂಹರಿಸಿದುದರ ನೆನಪಾಗಿ ದಸರಾ ಏರ್ಪಟ್ಟಿತ್ತೆಂದು ಹೇಳುತ್ತಾರೆ.

ಯಾವ ದೇವರ ಕೈಯಿಂದಲೂ ತನಗೇ ಮರಣವಿರಕೂಡದೆಂದು ಪರಮೇಶ್ವರನಿಂದ ವರವನ್ನು ಹೊಂದಿದ ಮಹಿಷಾಸುರನು, ಆ ವರದ ಗರ್ವದಿಂದ ಉಬ್ಬಿ ಬೀಗುತ್ತಾ ಎಲ್ಲರನ್ನೂ ಹಿಂಸಿಸಲಾರಂಭಿಸಿದನು. ಮಿತಿಮೀರಿದ ಅಹಂಕಾರದಿಂದ ಸಾಧುಗಳನ್ನೂ ಸಜ್ಜನರನ್ನೂ ಹಿಂಸಿಸಿದನು. ಆದುದರಿಂದ ದೇವತೆಗಳೆಲ್ಲರೂ ಹೋಗಿ ಪರಾಶಕ್ತಿಯನ್ನು ಬೇಡಿಕೊಂಡರು. ರಾಕ್ಷಸ ಸಂಹಾರಕ್ಕಾಗಿ ದುರ್ಗೇಯು ಅವತರಿಸಿದಳು.

ಅದ್ಭುತ ಶಕ್ತಿಯುತೆಯಾದ ದುರ್ಗಾ ದೇವಿಯು ದಿವ್ಯಾಸ್ತ್ರಗಳನ್ನು ಹೊಂದಿ, ಮಹಿಷಾಸುರನ ಮೇಲೆ ಬಿದ್ದು ಯುದ್ಧಮಾಡಿ ಅವನನ್ನು ಸಂಹಾರಮಾಡಿದಳು.

ಮಹಾಲಯ ಅಮಾವಾಸ್ಯೆಯಿಂದ ಆರಂಭವಾಗುವ ಈ ಹಬ್ಬವನ್ನು ಕೆಲವು ಪ್ರಾಂತ್ಯಗಳಲ್ಲಿ ಒಂಬತ್ತು ದಿನಗಳು ಆಚರಿಸುತ್ತಾರೆ. ಅವರು ಇದನ್ನು ದೇವಿ ನವರಾತ್ರಿ ಎಂದು ಹೇಳುತ್ತಾರೆ. ಕೆಲವು ಪ್ರಾಂತ್ಯಗಳಲ್ಲಿ ಇದನ್ನು ಹತ್ತು ದಿನಗಳ ಹಬ್ಬವಾಗಿ ಆಚರಿಸುತ್ತಾ ‘ದಸರಾ’ ಎಂದು ಕರೆಯುತ್ತಾರೆ.

ವಿನಾಯಕ ಚೌತಿ

 ಯಾವುದೇ ಒಂದು ಒಳ್ಳೆಯ ಕೆಲಸವನ್ನು ಪ್ರಾರಂಭಿಸುವಾಗ, ವಿಘ್ನಗಳು ಬರದಂತೆ ಕಾರ್ಯವು ಯಶಸ್ವಿಯಾಗಿ ನೆರವೇರಲು ವಿಘ್ನೇಶ್ವರನನ್ನು ಪೂಜಿಸಿ ಪ್ರಾರ್ಥಿಸುವುದು ಹಿಂದೂ ಜನರ ಪದ್ಧತಿ.

ಗಜಮುಖನಾದ, ಹೊಟ್ಟೆಯ ಗಣಪತಿಯ ಹುಟ್ಟಿದ ಹಬ್ಬವನ್ನು ಭಾದ್ರಪದ ಮಾಸದಲ್ಲಿ ಎಂದರೆ ಆಗಸ್ಟ್ ತಿಂಗಳಲ್ಲಿ ಆಚರಿಸುತ್ತಾರೆ. ಅವನು ಹುಟ್ಟಿದ ದಿನವನ್ನು ಗಣೇಶ ಚತುರ್ಥಿ ಅಥವಾ ವಿನಾಯಕ ಚೌತಿ ಎಂದು ಹೇಳುತ್ತೇವೆ. ವಿನಾಯಕ ಚೌತಿಯನ್ನು ದೇಶಾದ್ಯಂತಾ ಆಚರಿಸುತ್ತಾರೆ.

ಮಹಾರಾಷ್ಟ್ರದಲ್ಲಿ ಪ್ರತಿವರ್ಷವೂ ಭಾದ್ರಪದ ಶುಕ್ಲ ಚತುರ್ಥಿಯದಿನ ಗಣೇಶ ಮಹೋತ್ಸವವು ಆರಂಭವಾಗುತ್ತದೆ. ಹತ್ತು ದಿನಗಳ ಕಾಲ ನಡೆಯುವ ಈ ಉತ್ಸವವು ಹನ್ನೊಂದನೇ ದಿನ ಎಂದರೆ ಅನಂತ ಚತುರ್ದಶಿಯಂದು ಮುಕ್ತಾಯವಾಗುತ್ತದೆ.

ಮನೆಯಲ್ಲಿ ಚಿಕ್ಕ ಚಿಕ್ಕ ವಿಗ್ರಹಗಳ ರೂಪದಲ್ಲಿ ವಿಘ್ನೇಶ್ವರನನ್ನು ಪೂಜಿಸುತ್ತಾರೆ. ದೊಡ್ಡ ವಿಗ್ರಹಗಳು ಸುಮಾರು ಎಂಟರಿಂದ ಹತ್ತು ಮೀಟರ್‌ ಎತ್ತರದವರೆಗೂ ಇರುತ್ತವೆ. ಅನಂತ ಚತುರ್ದಶಿಯದಿನ ವಿನಾಯಕನ ವಿಸರ್ಜನೆಯನ್ನು ನಡೆಸುತ್ತಾರೆ. ಆ ದಿನ ಬಗೆಬಗೆಯ ಹೂಗಳಿಂದಲೂ, ಹಣ್ಣುಗಳಿಂದಲೂ, ನಾಣ್ಯಗಳಿಂದಲೂ ವಿಘ್ನೇಶ್ವರನ ವಿಗ್ರಹಗಳನ್ನು ಅಲಂಕರಿಸಿ, ದೀಪಾಲಂಕಾರ ಮಾಡಿದ ವಾಹನಗಳಲ್ಲಿ ಭಕ್ತಿಗೀತೆಗಳನ್ನು ಹಾಡುತ್ತಾ ಮಂಗಳವಾದ್ಯದೊಡನೆ ಉತ್ಸವವಾಗಿ ತೆಗೆದುಕೊಂಡು ಹೋಗಿ ನೀರಿನಲ್ಲಿ ವಿಸರ್ಜನೆ ಮಾಡುತ್ತಾರೆ.

ಹೈದರಾಬಾದು ನಗರದಲ್ಲಿ ಖೈರತಾಬಾದು ಪ್ರದೇಶದಲ್ಲಿ ಪ್ರತಿಷ್ಠಾಪಿಸಿರುವ 30 ಅಡಿಗಳ ಎತ್ತರದ ವಿಘ್ನೇಶ್ವರನ ವಿಗ್ರಹ ವಿನಾಯಕ ಚೌತಿಯ ದಿನ ಅಕ್ಕಿಹಿಟ್ಟು, ಬೆಲ್ಲ ಕೊಬ್ಬರಿ, ಎಳ್ಳುಗಳನ್ನು ಸೇರಿಸಿ ಸಿಹಿ ಕಡುಬನ್ನು ತಯಾರಿಸುತ್ತಾರೆ. ಈ ಕಡುಬುಗಳು ವಿನಾಯಕನಿಗೆ ತುಂಬಾ ಪ್ರಿಯವಾದುದೆಂದು ಹೇಳುತ್ತಾರೆ. ಆದುದರಿಂದಲೇ ವಿಘ್ನೇಶ್ವರನನ್ನು ‘ಮೋದಕ ಹಸ್ತ’ ನೆನ್ನುತ್ತಾರೆ. ಸಿಹಿ ಕಡುಬು, ಉಂಡೆಗಳು, ಗುಗ್ಗುರಿಗಳ ಜೊತೆಗೇ ಆಯಾ ಪ್ರಾಂತ್ಯಗಳಿಗೆ ಸೇರಿದ ಹಿಟ್ಟಿನ ತಿಂಡಿಗಳನ್ನು, ಹಣ್ಣುಗಳನ್ನು ನೈವೇದ್ಯವಾಗಿ ಇಡುತ್ತಾರೆ. ಉತ್ತರ ಭಾರತದ ರಾಜ್ಯಗಳಲ್ಲಿ ಬತ್ತಾಸು, ಲಡ್ಡು, ಚಕ್ಕಲಿ, ಕರ್ಜೀಕಾಯಿ, ಅತಿರಸ ಇತ್ಯಾದಿಗಳನ್ನು ಮಾಡುತ್ತಾರೆ.
 

ಕಾರ್ತೀಕ ದೀಪಂ!

ದಕ್ಷಿಣ ಭಾರತ ದೇಶದಲ್ಲಿ ಮುಖ್ಯವಾಗಿ ತಮಿಳು ನಾಡಿನಲ್ಲಿ ಆಚರಿಸುವ ದೀಪಗಳ ಹಬ್ಬ ಕಾರ್ತೀಕ ದೀಪಂ. ಕಾರ್ತೀಕ ಮಾಸದ ಪೌರ್ಣಮಿಯ ದಿನ ಈ ಹಬ್ಬ ಬರುತ್ತದೆ. ಈ ವರ್ಷ ನವಂಬರ್‌ 30ನೇ ದಿನದಂದೇ ಬರುತ್ತದೆ. ಈ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸುತ್ತಾರೆ.

ಪಂಚಭೂತಗಳಿಗೆಎಂದರೆ ಭೂಮಿ, ನೀರು, ಗಾಳಿ, ಅಗ್ನಿ, ಆಕಾಶದ ಅಧಿದೇವತೆಯಾದ ಪರಮೇಶ್ವರನು ಐದು ಸ್ಥಳಗಳಲ್ಲಿ ಐದು ಭೂತಗಳಾಗಿ ಪ್ರಕಟಗೊಂಡನೆಂದು ಪುರಾಣಗಳು ಹೇಳುತ್ತವೆ.

ಅರುಣಾಚಲದಲ್ಲಿ ಅಂದರೆ ತಿರುವಣ್ಣಾ ಮಲೈಯಲ್ಲಿ ಅಗ್ನಿಸ್ವರೂಪನಾಗಿ ಕಾಣಿಸಿಕೊಂಡನಂತೆ. ಪ್ರತಿವರ್ಷ ಕಾರ್ತೀಕ ಮಾಸದ ಭರಣಿ ನಕ್ಷತ್ರದ ದಿನ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ನಡೆಸಿ ಈ ಬೆಟ್ಟದ ಮೇಲೆ ದೀಪವನ್ನು ಹೊತ್ತಿಸಿ ವೈಭವದಿಂದ ಉತ್ಸವವನ್ನು ನಡೆಸುತ್ತಾರೆ.

ಮಳೆಗಾಲವು ಮುಗಿಯಿತೆಂದು ಪರಿಗಣಿಸುವುದಾಗಿ ಕೂಡಾ ಈ ಹಬ್ಬವು ಆಚರಿಸಲ್ಪಡುತ್ತದೆಂದು ಹೇಳುತ್ತಾರೆ. ಕಾರ್ತೀಕ ಮಾಸದ ಆರಂಭದಿಂದಲೇ ಹೆಂಗಸರು ಬೆಳಗಿನ ಜಾವದಲ್ಲೆದ್ದು ಸ್ನಾನಮಾಡಿ ನಡುಮನೆಯಲ್ಲಿ ತಂಬಿಟ್ಟಿನ ದೀಪಗಳನ್ನು ಉರಿಸುತ್ತಾರೆ. ಕಾರ್ತೀಕ ದೀಪದ ದಿನ ಪ್ರತಿಮನೆಯಲ್ಲೂ ವಿಶೇಷ ಪೂಜೆ ಮಾಡುತ್ತಾರೆ. ಮನೆಯನ್ನು ದೀಪಗಳಿಂದ ಅಲಂಕರಿಸುತ್ತಾರೆ. ದೇವಾಲಯಗಳಲ್ಲಿ ಗೋಪುರದ ಮೇಲೂ, ಕೊಳಗಳಲ್ಲೂ, ಬಾವಿಗಳಲ್ಲೂ ದೀಪಗಳನ್ನಿಡುವ ಆಚಾರವಿದೆ.

ಕೆಲವು ಕುಟುಂಬಗಳಲ್ಲಿ ಈ ದಿನ ಬೆಳಗಾದೊಡನೆಯೇ ಅಕ್ಕಿಹಿಟ್ಟು, ಬೆಲ್ಲ ಸೇರಿಸಿ ಮಾಡಿದ ತಂಬಿಟ್ಟಿನ ದೀಪಗಳಲ್ಲಿ ತುಪ್ಪವನ್ನು ಹಾಕಿ ನಡುಮನೆಯಲ್ಲಿ ಉರಿಸುತ್ತಾರೆ. ದೀಪ ಪೂಜೆಯನ್ನು ಮಾಡಿ ನಂತರ ದೇವರ ಪೂಜೆ ಮಾಡುತ್ತಾರೆ. ಮಕ್ಕಳು ದೀಪಾವಳಿಯಲ್ಲಿ ಉಳಿದ ಪಟಾಕಿ, ಬಾಣಬಿರುಸುಗಳನ್ನು ಈಗ ಹೊತ್ತಿಸುತ್ತಾರೆ. ದೀಪವು ಜ್ಞಾನದ ಸಂಕೇತ. ಜ್ಞಾನವನ್ನು ದೈವಸ್ವರೂಪವಾಗಿ ಭಾವಿಸುವ ಸಂಪ್ರದಾಯ ನಮ್ಮದು. ಅದಕ್ಕೊಂದು ಉತ್ತಮ ಉದಾಹರಣೆಯೇ ಈ ಕಾರ್ತೀಕ ದೀಪ...!

 ತಮಿಳುನಾಡು

  ತಮಿಳರಿಗೆ ಬಹಳ ಪ್ರಧಾನವಾದ ಹಬ್ಬ ಪೊಂಗಲ್‌. ಬೆಳೆಯು ಮನೆಗೆ ಸೇರಿದ ನಂತರ ರೈತರು ‘ತೈ’ ತಿಂಗಳಿನ ಮೊದಲನೇ ದಿನ ಅಂಗಳದಲ್ಲಿ ಪೊಂಗಲಿಟ್ಟು ಸೂರ್ಯ ಪರಮಾತ್ಮನಿಗೆ ಕೃತಜ್ಞತೆಗಳನ್ನು ತಿಳಿಸುವ ಹಬ್ಬ ಇದು. ಪೊಂಗಲ್‌ ಹಬ್ಬವನ್ನು ನಾಲ್ಕು ದಿನಗಳ ಕಾಲ ಆಚರಿಸುತ್ತಾರೆ. ಇದನ್ನು ರೈತರ ಹಬ್ಬವೆಂದು ಕೂಡಾ ಹೇಳಬಹುದು.
ಮೊದಲನೆಯ ದಿನ ಭೋಗಿ ಹಬ್ಬ. ಮನೆಬಾಗಿಲುಗಳನ್ನು ಶುಭ್ರಗೊಳಿಸಿ, ಕೆಲಸಕ್ಕೆ ಬಾರದ ವಸ್ತುಗಳನ್ನು ಬೆಳಗಿನ ಜಾವದಲ್ಲಿ ಮನೆಯ ಮುಂದೆ ಭೋಗಿ ಉರಿಯಲ್ಲಿ ಉರಿಸುತ್ತಾರೆ. ಮನಸ್ಸಿನಲ್ಲಿ ಕಮಟುಗಟ್ಟಿದ ಮೌಢ್ಯ ಭಾವನೆಗಳನ್ನೂ ಆಚಾರ ಸಂಪ್ರದಾಯಗಳನ್ನೂ ಬಿಟ್ಟುಬಿಡುವುದಕ್ಕೆ ಸಂಕೇತವೆಂದೂ ಇದನ್ನು ಹೇಳಬಹುದು. ಆ ದಿನ ಅಭ್ಯಂಜನ ಸ್ನಾನ ಮಾಡಿ ಹಬ್ಬ ದೂಟ ಮಾಡುತ್ತಾರೆ.

ಮಾರನೆಯ ದಿನ ಪೊಂಗಲ್‌. ಅದೇ ಮಕರ ಸಂಕ್ರಾಂತಿ. ಹೊಸ ಬಟ್ಟೆಗಳನ್ನು ಹಾಕಿಕೊಂಡು ಹೊಸ ಮಡಕೆಯಲ್ಲಿ ಹೊಸ ಅಕ್ಕಿ, ಹೊಸ ಬೆಲ್ಲ ಹಾಕಿ ಹಾಲು ಬೆರೆಸಿ ಪೊಂಗಲ್‌ ಮಾಡುತ್ತಾರೆ. ಬೆಳೆಯನ್ನು ಕರುಣಿಸುವ ಸೂರ್ಯ ಪರಮಾತ್ಮನನ್ನು ಪ್ರಾರ್ಥಿಸುತ್ತಾರೆ. ಕೇಲವು ಗ್ರಾಮಗಳಲ್ಲಿ ಜನರೆಲ್ಲರೂ ಒಂದೇ ಸ್ಥಳದಲ್ಲಿ ಸೇರಿ ದೊಡ್ಡ ದೊಡ್ಡ ಮಡಕೆಗಳಲ್ಲಿ ಪೊಂಗಲು ಮಾಡುವ ಸಂಪ್ರದಾಯವೂ ಇದೆ.

ಪಟ್ಟಣ ಪ್ರದೇಶಗಳಲ್ಲೂ ಸಹಾ ಹೊಸ ಅಕ್ಕಿ, ಬೆಲ್ಲ, ಹಾಲು ಸೇರಿಸಿ ಸಕ್ಕರೆ ಪೊಂಗಲ್‌ ಮಾಡುತ್ತಾರೆ. ಮನೆಯನ್ನು ಶುಭ್ರಗೊಳಿಸಿ ಮನೆ ಬಾಗಿಲು, ಅಂಗಳಗಳಲ್ಲಿ ದೊಡ್ಡ ದೊಡ್ಡ ರಂಗೋಲಿಗಳನ್ನಿಡುತ್ತಾರೆ. ಬಾಗಿಲಿನಲ್ಲಿ ಮಾವಿನೆಲೆಯಿಂದ ತೋರಣಕಟ್ಟಿ ಅಲಂಕರಿಸುತ್ತಾರೆ. ಸೂರ್ಯನನ್ನು ಆರಾಧಿಸುತ್ತಾರೆ.

No comments:

Post a Comment