Wednesday, 18 May 2011

ಕಿರುಗತೆ

ಈ ಬಾರಿ ತನ್ನ ಮಾರ್ಮಿಕವಾದ ಬರಹಗಳಿಗೆ ಪ್ರಖ್ಯಾತನಾಗಿರುವ ಲೇಖಕ ಖಲೀಲ್ ಗಿಬ್ರಾನ್ ನ ಎರಡು ಕಿರುಗತೆಗಳನ್ನು ಇಲ್ಲಿ ಕೊಡುತ್ತಿದ್ದೇನೆ.

ಬದಲಾವಣೆ
ಅಫ್ಕಾರ್ ಎಂಬ ಪುರಾತನ ನಗರದಲ್ಲಿ ಇಬ್ಬರು ಘನ ವಿದ್ವಾಂಸರು ವಾಸಿಸುತ್ತಿದ್ದರು. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುತ್ತಿರಲಿಲ್ಲ. ಅವರು ಪರಸ್ಪರರನ್ನು ದ್ವೇಷಿಸುತ್ತಾ, ಒಬ್ಬರು ಇನ್ನೊಬ್ಬರ ಪಾಂಡಿತ್ಯವನ್ನು ತೆಗಳುತ್ತಿದ್ದರು.
ಅವರಲ್ಲಿ ಒಬ್ಬ ವಿದ್ವಾಂಸ ದೇವರ ಅಸ್ತಿತ್ವವನ್ನು ನಿರಾಕರಿಸುತ್ತಿದ್ದ. ಇನ್ನೊಬ್ಬ ಆಸ್ತಿಕನಾಗಿದ್ದ.
ಒಂದು ದಿನ ಅವರು ಮಾರುಕಟ್ಟೆಯಲ್ಲಿ ಭೇಟಿಯಾದರು. ತಮ್ಮ ಬೆಂಬಲಿಗರ ಸಮ್ಮುಖದಲ್ಲಿ ‘ದೇವರು ಅಸ್ತಿತ್ವದಲ್ಲಿದ್ದಾನೆ’. ‘ದೇವರು ಅಸ್ತಿತ್ವದಲ್ಲಿಲ್ಲ’ ಎಂದು ಘನಘೋರ ಚರ್ಚೆ ಮಾಡಿದರು.
ಗಂಟೆಗಳ ಕಾಲ ವಾದ ಮಾಡಿದ ಮೇಲೆ ಅವರು ಬೇರೆಯಾದರು.
ಆ ಸಂಜೆ ನಾಸ್ತಿಕನು ದೇವಾಲಯಕ್ಕೆ ಹೋಗಿ ಉದ್ದಂಡ ನಮಸ್ಕಾರ ಮಾಡಿ ತಾನು ಈ ತನಕ ಹಾದಿ ತಪ್ಪಿ ನಡೆಯುತ್ತಿದ್ದುದ್ದಕ್ಕಾಗಿ ಕ್ಷಮೆಗಾಗಿ ಪ್ರಾರ್ಥಿಸಿದ.
ಅದೇ ಹೊತ್ತಿನಲ್ಲಿ ದೇವರ ಅಸ್ತಿತ್ವವನ್ನು ಎತ್ತಿಹಿಡಿದಿದ್ದ ಆಸ್ತಿಕನು ತನ್ನ ಪವಿತ್ರ ಗ್ರಂಥಗಳನ್ನು ಸುಟ್ಟು ಹಾಕಿದ. ಯಾಕೆಂದರೆ ಅವನು ನಾಸ್ತಿಕನಾಗಿಬಿಟ್ಟಿದ್ದ! ಅವರು ಒಬ್ಬರನ್ನೊಬ್ಬರು ಬದಲಿಸಿದ್ದರು.

ಪ್ರತಿಮೆ

ಒಂದಾನೊಂದು ಕಾಲದಲ್ಲಿ ಬೆಟ್ಟಗಳ ನಡುವೆ ಒಬ್ಬ ಮನುಷ್ಯ ವಾಸಿಸುತ್ತಿದ್ದ. ಅವನ ಬಳಿ ಪ್ರಾಚೀನ ಶಿಲ್ಪಿಯೊಬ್ಬ ಕೆತ್ತಿದ್ದ ಸುಂದರವಾದ ಪ್ರತಿಮೆಯಿತ್ತು. ಅದು ಅವನ ಮನೆ ಬಾಗಿಲ ಮುಂದೆ ಮುಖ ಕೆಳಗಾಗಿ ಬಿದ್ದಿತ್ತು. ಅವನಿಗೆ ಅದರ ಪರಿವೆಯೇ ಇರಲಿಲ್ಲ.
ಒಂದು ದಿನ ನಗರದ ಒಬ್ಬ ಜ್ಞಾನಿ ಅವನ ಮುಂದೆ ಹಾದುಹೋಗುತ್ತಿದ್ದ. ಅವನ ಕಣ್ಣಿಗೆ ಈ ಪ್ರತಿಮೆ ಬಿತ್ತು. ಅವನು ಈ ಪ್ರತಿಮೆಯನ್ನು ನನಗೆ ಮಾರುತ್ತೀರಾ ಎಂದು ಮಾಲೀಕನನ್ನು ಕೇಳಿದ.
ಮಾಲೀಕ ಜೋರಾಗಿ ನಕ್ಕ, 'ಆ ಮುಸುಕಾದ ಕೊಳಕು ಕಲ್ಲಿನ ತುಂಡನ್ನು ಯಾರು ಕೊಳ್ಳುತ್ತಾರೆ, ಸ್ವಲ್ಪ ಹೇಳುತ್ತೀರಾ?' ಎಂದು ವ್ಯಂಗ್ಯವಾಗಿ ಕೇಳಿದ.
'ನಾನು ಈ ಬೆಳ್ಳಿಯ ನಾಣ್ಯವನ್ನು ಅದಕ್ಕೆ ಬದಲಾಗಿ ಕೊಡುತ್ತೇನೆ' ಎಂದು ನಗರದ ಮನುಷ್ಯ ಹೇಳಿದ.
ಪ್ರತಿಮೆಯ ಮಾಲೀಕನಿಗೆ ಆಶ್ಚರ್ಯ ಮತ್ತು ಸಂತೋಷ ಜತೆಗೇ ಆಯಿತು.
ಆ ಪ್ರತಿಮೆಯನ್ನು ಆನೆಯ ಮೇಲೆ ಹೇರಿಕೊಂಡು ನಗರಕ್ಕೆ ಸಾಗಿಸಲಾಯಿತು. ಕೆಲವು ತಿಂಗಳುಗಳ ನಂತರ ಬೆಟ್ಟದ ಮನುಷ್ಯ ನಗರಕ್ಕೆ ಹೋದ. ಅಲ್ಲಿನ ಬೀದಿಗಳಲ್ಲಿ ನಡೆಯುತ್ತಿದ್ದಾಗ ಒಂದು ಅಂಗಡಿಯ ಮುಂದೆ ಜನರ ಗುಂಪು ಸೇರಿದ್ದನ್ನು ನೋಡಿದ. ಒಬ್ಬ ಮನುಷ್ಯ ಜೋರಾಗಿ ಕೂಗುತ್ತಿದ್ದ, 'ಬನ್ನಿ, ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾದ ಅದ್ಭುತ ಪ್ರತಿಮೆಯನ್ನು ನೋಡಿ. ಅಸಾಮಾನ್ಯ ಕಲಾವಿದನ ಅತ್ಯಂತ ರಮಣೀಯ ಕೃತಿಯನ್ನು ನೋಡಲು ಕೇವಲ ಎರಡು ಬೆಳ್ಳಿಯ ನಾಣ್ಯಗಳು ಮಾತ್ರ'.
ಆಗ ಬೆಟ್ಟದ ಮನುಷ್ಯ ಎರಡು ಬೆಳ್ಳಿಯ ನಾಣ್ಯಗಳನ್ನು ಕೊಟ್ಟು ಅಂಗಡಿಯ ಒಳಗೆ ಹೋದಾಗ ಅವನು ಸ್ವತಃ ಒಂದು ಬೆಳ್ಳಿಯ ನಾಣ್ಯಕ್ಕಾಗಿ ಮಾರಿದ್ದ ಪ್ರತಿಮೆ ಅಲ್ಲಿತ್ತು.

ನಿಖಿಲ್ ಕೋಲ್ಪೆ

No comments:

Post a Comment