ಅಕ್ಷರ

ದಿನದಿನಕ್ಕೂ ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ, 'ವಿದ್ಯಾಭ್ಯಾಸ'ವೆನ್ನುವುದು ದಿನಕ್ಕೊಂದು ನಿಯಮಗಳ, ಗಳಿಗೆಗೊಂದು ಥೀಯರಿಗಳ, ನಿಮಿಷ ನಿಮಿಷಕ್ಕೂ ಬದಲಾಗುತ್ತಿರುವ ಅಭಿಪ್ರಾಯಗಳ ಗೋಜಲಿನ ಸಂತೆಯಾಗಿ, ತಾಯ್ತಂದೆಯರಿಗೆ 'ಎನು ಓದಿದರೂ ಅಷ್ಟೇ!' ಎಂಬಂತಃ ನೈರಾಷ್ಯ ಭಾವವೊಂದು ಮೂಡಿರುವುದನ್ನೊ, ಇಲ್ಲವೇ, ಯಾವುದೋ ಗಾಳೀಗುಳ್ಳೆಗೆ ಮನಸೋತು ವಾಸ್ತವದ ಅರಿವಿಲ್ಲದೆ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ದುಡುಕುವುದನ್ನೋ ನಾವೂ ನೀವು ಕಂಡಿರುತ್ತೇವೆ, ಅನುಭವಿಸಿರಲಿಕ್ಕೂ ಸಾಕು. ಅದರಲ್ಲೂ ಸಣ್ಣ ಪುಟ್ಟ ಹಳ್ಳಿಗಳಲ್ಲಿರುವ ಮಧ್ಯಮವರ್ಗದ, ಮುಖ್ಯವಾಹಿನಿಯಿಂದ ಕೊಂಚ ದೂರ ಇರುವವರಿಗಂತೂ ತಮ್ಮ ಮಕ್ಕಳ ಭವಿಷ್ಯರೂಪಿಸುವುದು ಒಂದು ಸವಾಲು. ನಿನ್ನೆ 'ಸ್ಕೋಪ್' ಇದೆಯೆಂದ ಕೋರ್ಸಿಗೆ ಇಂದಿಲ್ಲ, ನಾಳಿನ ಅವಕಾಶಗಳಂತೂ ತೀರ ಅನಿಶ್ಚಿತ ಎಂಬಂತ ಅಯೋಮಯ ಪರಿಸ್ಥಿತಿ.
ಇದರೊಂದಿಗೆ, ಜಾಗತೀಕರಣ, ಖಾಸಗೀಕರಣಗಳ ಬಳುವಳಿಯಾಗಿ ತೆರೆದುಕೊಳ್ಳುತ್ತಿರುವ ಇಂದಿನ ಹೊಸ ಹೊಸ ಉದ್ಯೋಗಾವಕಾಶಗಳು ಜೊತೆ ಜೊತೆಗೆ, ಹೆಚ್ಚು ಹೆಚ್ಚು ಸ್ಪರ್ಧಾತ್ಮಕವೆನಿಸುತ್ತಿದ್ದು  ಮಾಡುವ ಕೆಲಸದಲ್ಲಿರಬೇಕಾದ ನೈಜ ಆಸಕ್ತಿ, ಶ್ರದ್ದೆ ಇವುಗಳೆ ಯಶಸ್ಸಿನ ಅಂತಿಮ ಮಾನದಂಡವಾಗಿ ಪರಿಣಮಿಸಿ, ಕಾಗದದ ಡಿಗ್ರಿಗಳು ಅಪ್ರಯೋಜಕವೆನಿಸುತ್ತಿದೆ. ಈ ಮದ್ಯೆ, ನಮ್ಮ ಮಕ್ಕಳಲ್ಲಿ ಹುದುಗಿರುವ ಆಸಕ್ತಿಯನ್ನೂ ಅವರಲ್ಲಿ ಅವ್ಯಕ್ತವಾಗಿರುವ ಸಾಮರ್ಥ್ಯವನ್ನೂ ಗುರುತಿಸಿ ಅದರ ಆಧಾರದ ಮೇಲೆ ಅವರ ಜೀವನಪಥಗಳ ನಿಷ್ಕರ್ಷೆಯಾಗಬೇಕು ಎನ್ನುವ ಇಂದಿನ ಮನ:ಶಾಸ್ಥ್ರಜ್ಞರ ಖಚಿತ ಅಭಿಪ್ರಾಯ.
ವಿದ್ಯಾರ್ಥಿಗಳು ಯಾರದ್ದೊ ಒತ್ತಡಕ್ಕೋ, ಅಥವಾ ಇನ್ಯಾವುದೊ ತಪ್ಪು ಮಾಹಿತಿಗಳಿಂದ ಪ್ರೇರಿತರಾಗಿಯೊ ತಮ್ಮ ಬದುಕಿನ ದಾರಿಗಳನ್ನು ಕಂಡುಕೊಳ್ಳುವ ಬದಲು, ತಮ್ಮ ಆಸಕ್ತಿಯ ಕ್ಷೇತ್ರದಲ್ಲೆ ತಮ್ಮ ಜೀವನೋಪಾಯದ ಮಾರ್ಗವನ್ನು ಕಂಡುಕೊಳ್ಳುವುದೇ ಯಶಸ್ಸಿಗೆ ಪ್ರೇರಕ ಎಂಬುದನ್ನು 'ಅಕ್ಷರ ವಿಭಾಗ' ಬಿಂಬಿಸಲೆತ್ನಿಸಲಿದೆ. ಮಕ್ಕಳ ಮಾನಸಿಕ ಸಾಮರ್ಥ್ಯ ಹಾಗೂ ಅದರ ಒಲವು ನಿಲುವುಗಳನ್ನು ಅಳೆದು ಅದರ ಆಧಾರದ ಮೇಲೆ ಅವರವರ ಸಾಮರ್ಥ್ಯಕ್ಕನುಗುಣವಾದ ಕ್ಷೇತ್ರವನ್ನು ಗುರುತಿಸುವುದಕ್ಕೆ ಹಿನ್ನೆಲೆಯಾಗಿ ಬೇಕಾದ ವಿಶಿಷ್ಟ ಮನೋವೈಜ್ನಾನಿಕ ಕಾರ್ಯಾಗಾರಗಳನ್ನು ನಡೆಸುತ್ತಿದೆ.  ೧೦ನೇ ತರಗತಿಯ ಮಕ್ಕಳು ಹಾಗೂ ಅವರ ತಾಯ್ತಂದೆಯರನ್ನು ಈ ಶಿಬಿರ ಗುರಿಯಾಗಿಸಿಕೊಂಡು,ಆ ಮೂಲಕ ಅವರ ಭವಿಷ್ಯದ ನಿರ್ದಾರಗಳು ಸುಲಭವಾಗಿಸುವಲ್ಲಿ ಒಂದಿಷ್ಟು ಪೂರಕ ಮಾಹಿತಿ, ವಿಚಾರಗಳನ್ನು ನೀಡುವ ಪ್ರಯತ್ನ ಮಾಡಲಿದೆ.