ಪ್ರಾಥಮಿಕ ಹಂತ

ಪ್ರಾಥಮಿಕ ಹಂತದಲ್ಲಿ ಇಂಗ್ಲೀಷ್ ಬೇಕೆ ಬೇಡವೆ?
ಸುಮಾರು ಎಂಭತ್ತರ ದಶಕದ ಉತ್ತರಾರ್ಧದಲ್ಲಿ ಕರ್ನಾಟಕದ ಹಳ್ಳಿಗಳಂತಿದ್ದ ಊರೂರೂಗಳಲ್ಲೂ ಇಂಗ್ಲೀಷ್ ಮೀಡಿಯಂ ಸ್ಕೂಲುಗಳು ಅಣಬೆಗಳಂತೆ ಹುಟ್ಟಿಕೊಂಡವು. ಇನ್ನೂ ಮೊಲೆ ಚೀಪುತ್ತಿದ್ದ ಕಂದಮ್ಮಗಳನ್ನೂ ಎಲ್‌ಕೆಜಿ ಎಂಬ ಮಾಯಕದ ಬೇಬಿಸಿಟ್ಟರ್‌ಗಳಿಗೆ ಅವುಗಳ ಪುಟ್ಟ ಹೂವಿನಂಥ ಪಾದಗಳಿಗೆ ಶೂಸುಗಳನ್ನು ಬಿಗಿದು, ಕೊರಳಿಗೆ ಟೈ ಜೋತು ಬಿಟ್ಟು ಗರಿಗರಿಯಾದ ಯೂನಿಫಾರಂ ತೊಡಿಸಿ ಮನೆ ಬಾಗಿಲಿಗೇ ಬರುವ ಬಸ್ಸುಗಳಲ್ಲಿ ತುಂಬಿ ಕಳಿಸುವ, ಕಳಿಸಿ ಅನನ್ಯ ಧನ್ಯತಾ ಭಾವದಿಂದ ಎದೆಯುಬ್ಬಿಸಿ ಹಿಗ್ಗುವ ತಂದೆ ತಾಯಿಗಳು, ಅಲ್ಲಲ್ಲ, ಡ್ಯಾಡೀ ಮಮ್ಮಿಗಳು ರಸ್ತೆಯಂಚಿನಲ್ಲಿ ಕಂಡುಬರತೊಡಗಿದ್ದರು. ಮುಂದೆ ಇವರೆಲ್ಲ ತಮ್ಮ ಮಕ್ಕಳ ಹೋಂ ವರ್ಕು, ಟ್ಯೂಷನ್ನು, ಎಪ್ಲಸ್ಸು ಬಿಮೈನಸ್ಸು ರ್‍ಯಾಂಕಿಂಗ್‌ಗಳಲ್ಲಿ ಕಳೆದು ಹೋದ ಬಗೆಯೇ ಒಂದು ಕನಸಿನಂತಿದೆ! ಕ್ರಮೇಣ ಸರಿಯಾದ ಸವಲತ್ತು, ಪರಿಕರಗಳು, ಪೀಠೋಪಕರಣಗಳು, ಉಪಾಧ್ಯಾಯರುಗಳಿಲ್ಲದೆ ದೊಡ್ಡಿಯಂತಾಗಿದ್ದ ಸರಕಾರೀ ಶಾಲೆಗಳಿಗೆ ಹಾಜರಾತಿಯೇ ಇಲ್ಲದ ಸ್ಥಿತಿ ಬಂತು. ಅಲ್ಲಿಂದೀಚೆಗೆ ನಮ್ಮ ಸರಕಾರಗಳು ಈ ಶಾಲೆಗಳ ಆಕರ್ಷಣೆ ಹೆಚ್ಚಿಸಲು ತರಹೇವಾರೀ ರಂಗಿನಾಟಗಳನ್ನು ಆಡುತ್ತ ಬಂದಿರುವುದು ನಮಗೆಲ್ಲ ಗೊತ್ತಿರುವ ಸಂಗತಿಯೇ. ಅಂಥವುಗಳ ಸಾಲಿಗೇ ಸೇರಿದ ಹೊಸ ಯೋಜನೆ, ಒಂದನೆಯ ತರಗತಿಯಿಂದಲೇ ಇಂಗ್ಲೀಷ್!
ಬಹುಷಃ ನಮ್ಮ ಮಕ್ಕಳಿಗೆ ಒಂದನೆಯ ತರಗತಿಯಿಂದಲೇ ಇಂಗ್ಲೀಷ್ ಹೇಳಿಕೊಡಬೇಕೆ, ಬೇಡವೆ, ಯಾಕೆ ಎಂಬೆಲ್ಲ ಪ್ರಶ್ನೆಗಳಿಗೆ ಈಗಾಗಲೇ ನಮ್ಮ ಹೆತ್ತವರ ಬಹುಮತದ ಉತ್ತರಗಳು ಎಲ್ಲರಿಗೂ ಗೊತ್ತಿವೆ! ಹೇಳಬೇಕೆಂದರೆ, ನಮ್ಮ ಮಕ್ಕಳು ಈ ಇಂಗ್ಲೀಷ್ ಮೀಡಿಯಂ ಸ್ಕೂಲುಗಳಲ್ಲಿ ಕನಿಷ್ಠ ಕನ್ನಡವನ್ನೂ ಒಂದಾನೊಂದು ಭಾಷೆಯನ್ನಾಗಿ ಕಲಿಯುತ್ತ ಅದನ್ನು ಪೂರ್ತಿಯಾಗಿ ಮರೆಯದಂತಾಗಲಿ ಎಂಬ ನಾಚಿಕೆಗೇಡಿನ ಆಶಯ ಕೂಡ ಈಡೇರದ ಆತಂಕಕಾರಿ ಸ್ಥಿತಿ ಇತ್ತು ಮತ್ತು ಇದೆ. ಅದರ ಬಗ್ಗೆ ಈ ಸ್ಕೂಲುಗಳಿಗೆ ಅನುಮತಿ, ಮಾನ್ಯತೆ ನೀಡುವ ಸರಕಾರಗಳಿಗಾಗಲೀ, ಪಠ್ಯಕ್ರಮ ರೂಪಿಸುವವರಿಗಾಗಲೀ, ಈ ಶಾಲೆಗಳ ಶೈಕ್ಷಣಿಕ ಮೇಲುಸ್ತುವಾರಿ ನಡೆಸುವವರಿಗಾಗಲೀ, ಕನ್ನಡದ ಬಗ್ಗೆ ಬಡಿದಾಡುವ 'ಓರಾಟಗಾರ'ರಿಗಾಲೀ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ನಮ್ಮ ಮಕ್ಕಳಲ್ಲೂ ಕನ್ನಡದ ಬಗ್ಗೆ, ಅದೊಂದು ಮಾತಿಗಲ್ಲದೆ ಓದು ಬರಹದ ಮಾಧ್ಯಮ ಕೂಡ ಆಗಿ ಉಳಿಯುವಂತೆ ಬಳಸಲು ಅವರಲ್ಲಿ ಆಸಕ್ತಿ, ಪ್ರಜ್ಞೆ, ಪ್ರೀತಿ, ಅಭಿಮಾನ ಉಳಿಸುವುದಕ್ಕಾಗಲೀ ಬೆಳೆಸುವುದಕ್ಕಾಗಲೀ ಅಗತ್ಯವಾದ ಪೂರಕ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳುವಲ್ಲಿಯಾಗಲೀ ಯಾವುದೇ ಚಿಂತಕರು, ಶಿಕ್ಷಕರು, ಕನ್ನಡ ಅಭಿಮಾನಿಗಳು, ವಿವಿಧ ಕನ್ನಡ ಭಾಷಾಪರ ಸರಕಾರೀ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತಿ ಶ್ರೇಷ್ಠರು ಶ್ರಮಿಸಿದ ಉದಾಹರಣೆಗಳಿಲ್ಲ.
ಕನ್ನಡ ಶಾಲೆಗಳ ದುಸ್ಥಿತಿಯ ಬಗ್ಗೆ ಸಾಕಷ್ಟು ದೂರುಗಳಿವೆ. ಅವುಗಳತ್ತ ಸಾಕಷ್ಟು ಗಮನ ಹರಿದಿಲ್ಲ. ಇಂಗ್ಲೀಷ್ ಭಾಷೆ ಕನ್ನಡ ನಾಡಿನಲ್ಲೇ ಸಾರ್ವತ್ರಿಕವಾಗಿ ಪಡೆಯುತ್ತಿರುವ ಮನ್ನಣೆ, ಗೌರವ, ಕನ್ನಡದ ಮೇಲೆ ಸಾಧಿಸಿದ ಮೇಲ್ಗೈ ಮತ್ತು ಆ ಭಾಷೆ ಬರದವರು ಎದುರಿಸುವ ಅಪಮಾನ, ನಿರ್ಲಕ್ಷ್ಯಗಳಲ್ಲಿ ನಮ್ಮ ನಿಮ್ಮಂಥ ಎಲ್ಲ ಕನ್ನಡಿಗ ವಿದ್ಯಾವಂತರ ಮತ್ತು ಹಾಗೆ ಪರಿಗಣಿಸಲ್ಪಡಲು ಹಾತೊರೆಯುವವರ ಪಾಲಿಲ್ಲವೆ? ಸರಕಾರದ ಸದ್ಯದ ಗಮನ ಸರಕಾರೀ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವುದಷ್ಟೇ ಇದ್ದಂತಿದೆ. ಅದಕ್ಕಾಗಿ ಅದು ಸರಕಾರೀ ಶಾಲೆಗಳನ್ನೆಲ್ಲ ಇಂಗ್ಲೀಷ್ ಮೀಡಿಯಂ ಸ್ಕೂಲುಗಳನ್ನಾಗಿ ಪರಿವರ್ತಿಸುವುದಕ್ಕೆ ಇನ್ನೂ ಮುಂದಾಗಿಲ್ಲ ಎನ್ನುವುದೇ ಸದ್ಯದ ಸಮಾಧಾನ! ಆದರೆ ಇಂಗ್ಲೀಷ್ ಮೀಡಿಯಂ ಸ್ಕೂಲುಗಳು ಕನ್ನಡದ ದುಸ್ಥಿತಿಗೆ ಕಾರಣವಾಗುವಂಥ ಏನೆಲ್ಲ ಪರಿಣಾಮಗಳನ್ನು ಈ ತನಕ ಉಂಟು ಮಾಡಿವೆಯೋ ಮತ್ತು ಮುಂದೆಯೂ ಮಾಡುತ್ತ ಇರಲಿವೆಯೋ ಆ ಮಾರಕ ವಿದ್ಯಮಾನಗಳನ್ನು ಸರಕಾರದ ಈ ಸದ್ಯದ ನಿರ್ಧಾರದಿಂದ ಪರಿಹರಿಸುವುದಕ್ಕಾಗಲೀ ತಡೆಗಟ್ಟುವುದಕ್ಕಾಗಲೀ ಸಾಧ್ಯವಾಗುವುದೆ? ಇಲ್ಲ. ಯಾಕೆಂದರೆ ನಮ್ಮ ಸರಕಾರೀ ಶಾಲೆಗಳು ಅವು ಇವತ್ತು ಏನಾಗಿವೆಯೋ ಹಾಗೆಯೇ ಉಳಿಯುವ ತನಕ ಮತ್ತು ಅವು ಕಲಿಸಬಹುದಾದ ಇಂಗ್ಲೀಷ್ ತನ್ನ ಗುಣಮಟ್ಟದಲ್ಲಿ ಮತ್ತು ಹೆತ್ತವರ ವಿಶ್ವಾಸಗಳಿಸುವಲ್ಲಿ ಸಫಲವಾಗುವ ತನಕ ಅದು ಸಾಧ್ಯವಾಗಲಾರದು.
ಸರಕಾರದ ನಿರ್ಧಾರದ ಹಿಂದೆ ನಮ್ಮ ಮಕ್ಕಳಿಗೆ ಶುದ್ಧವಾದ ಇಂಗ್ಲೀಷನ್ನು ಸಮರ್ಥವಾಗಿ ಕಲಿಸುವುದಕ್ಕೆ ಅಗತ್ಯವಾದ ಯಾವುದೇ ಸಿದ್ಧತೆಗಳು ಅಗತ್ಯ ಎಂಬ ಸಾಮಾನ್ಯ ಜ್ಞಾನವಾದರೂ ಇರುವಂತೆ ಕಾಣುತ್ತಿಲ್ಲ. ಸದ್ಯ ಇರುವ ಅಧ್ಯಾಪಕರೇ ಇಂಗ್ಲೀಷನ್ನೂ ಕಲಿಸುತ್ತಾರೆ, ಬಹುಷಃ. ಅವರು ತಮಗೆ ಹೆಚ್ಚಿದ ವರ್ಕ್‌ಲೋಡ್‌ಗಾಗಿ ಸರಕಾರವನ್ನೂ, ಮಕ್ಕಳನ್ನೂ ತಾವು ಎಂದೋ ಇಂಗ್ಲೀಷ್ ಕಲಿತ ಕರ್ಮಕ್ಕೆ ಶಪಿಸುತ್ತಾ ಅದೇನನ್ನು ಕಲಿಸುತ್ತಾರೋ ಎಂದು ನೆನೆದರೇ ಭಯವಾಗುತ್ತದೆ. ನನ್ನ ತಲೆಮಾರಿನಲ್ಲೇ ನಮ್ಮ ಪ್ರೈಮರಿ ಇಂಗ್ಲೀಷನ್ನು ಆರು ತಿಂಗಳು ಶ್ರಮಿಸಿ ಹೈಸ್ಕೂಲಿನ ಒಬ್ಬರು ಅಧ್ಯಾಪಕರು ತಿದ್ದಿದ ನೆನಪಿನ್ನೂ ಇದೆ ನನಗೆ. ಇವತ್ತಿಗೂ ನನ್ನ ಸದ್ಯದ ಇಂಗ್ಲೀಷಿಗಾಗಿಯೂ ನಾನು ಶ್ರೀ ಟಿ.ಆರ್‍. ಹೊಳ್ಳರಿಗೆ ಋಣಿ! ಸರಿಯಾದ ಸಮಯಕ್ಕೆ ಬಾರದ ಪಠ್ಯಪುಸ್ತಕಗಳು, ಹೊಟ್ಟೆಪಾಡಿಗೊಂದು ವೃತ್ತಿ ಎಂಬಂತೆ ಇಷ್ಟವಿಲ್ಲದಿದ್ದರೂ ಈ ಶಿಕ್ಷಕ ವೃತ್ತಿಗೆ ಅನಿವಾರ್ಯವಾಗಿ ಸೇರಿದಂತಿರುವ ಕೆಲವು ಅಧ್ಯಾಪಕರು, ಕೆಲವೆಡೆ ಹೆಸರಿಗಾದರೂ ಇಲ್ಲದ ಶಿಕ್ಷಕರು, ಕರಿಹಲಗೆ, ಬೆಂಚು, ಕುಡಿಯುವ ನೀರು, ಶೌಚಾಲಯಗಳು.... ಮಕ್ಕಳೇ ನಿಭಾಯಿಸ ಬೇಕಾಗಿರುವ ಶುಚಿತ್ವ ಮತ್ತು ಇತರ ಅನೇಕ ಕೆಲಸಗಳು...
ಯಾವ ಪ್ರಜ್ಞಾವಂತ ತಂದೆ ತಾಯಿ ತಮ್ಮ ಮಕ್ಕಳನ್ನು ಈ ಶಾಲೆಗಳಿಗೆ ಕಳಿಸುತ್ತಾರೆ? ಇನ್ನು ಅನಿವಾರ್ಯವಾಗಿ ಈ ಶಾಲೆಗಳಿಗೇ ಹೋಗಬೇಕಾದ ದುರ್ವಿಧಿಗೆ ಬಲಿಯಾದ ಮಕ್ಕಳ ಇಂಗ್ಲೀಷ್ ಎಲ್ಲಾ ಕಾಲಕ್ಕೂ ಎರಡನೆಯ ದರ್ಜೆಯ ಇಂಗ್ಲೀಷಾಗಿಯೇ ಉಳಿಯುತ್ತದೆ. ನನ್ನ ತಲೆಮಾರಿನ, ಪಿಯುಸಿ ತನಕ ಕನ್ನಡ ಮಾಧ್ಯಮದಲ್ಲಿ ಕಲಿತು ಮುಂದೆ ಇಂಗ್ಲೀಷ್ ಮಾಧ್ಯಮಕ್ಕೆ ಅನಿವಾರ್ಯವಾಗಿ ಒಗ್ಗಿಕೊಳ್ಳಬೇಕಾದ ವಿದ್ಯಾರ್ಥಿಗಳು ಎದುರಿಸಿದ ಅಪಮಾನ, ಹಿಂಜರಿಕೆ, ಸಂಕಟಗಳು ಇವರಿಗೆ ಎಂದಿಗೂ ತಪ್ಪುವುದಿಲ್ಲ! ಮತ್ತಿನ್ಯಾವ ಕರ್ಮಕ್ಕೆ ಈ ಬೇಗ ಕಲಿಸಿಬಿಡುವ ನಿರ್ಧಾರ? ಹೀಗೆನ್ನುವಾಗ ನಮ್ಮ ಬಹುಪುರಸ್ಕೃತ ಇಂಗ್ಲೀಷ್ ಮೀಡಿಯಂ ಸ್ಕೂಲುಗಳ ಎಳೆ ಮೇಡಮ್ಮುಗಳು ಹೇಳಿಕೊಡುವ ಇಂಗ್ಲೀಷು ಕೂಡಾ ದರಿದ್ರ ಇಂಗ್ಲೀಷೇ ಎಂಬುದನ್ನು ನಾನು ಮರೆತಿಲ್ಲ. ಗಮನಿಸ ಬೇಕಾದ ಅಂಶ ಎಂದರೆ ಅದನ್ನು ಹಾಗೆಂದು ಕರೆಯುವ ಧೈರ್ಯ ಕೂಡಾ ನಮ್ಮ ಹೆತ್ತವರಲ್ಲಿ ಇಲ್ಲ. ಆದರೆ ಕನ್ನಡದ ಶಾಲೆಗಳ ಬಗ್ಗೆ ಅವೇ ನಾಲಗೆಗಳು ಸಡಿಲ ಹರಿಯುತ್ತವೆ! ಅಯ್ಯೋ ಕನ್ನಡವೆ!
ಒಂದಿದ್ದರೆ ಇನ್ನೊಂದಿಲ್ಲದ ನಮ್ಮ ಕನ್ನಡ ಶಾಲೆಗಳು ಒಂದನೆಯ ತರಗತಿಯಿಂದಲೇ ಇಂಗ್ಲೀಷ್ ಕಲಿಸುವ ಮಂತ್ರಿಮಾಗಧರ ಘೋಷಣೆಯಿಂದಲೇ ಬದಲಾಗುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!!! ಎಲ್ಲಕ್ಕಿಂತ ಮುಖ್ಯವಾದ ಸಂಗತಿ ಏನೆಂದರೆ, ನಮ್ಮ ಮಕ್ಕಳು ಶಾಲೆಗಳಲ್ಲಿ ಎಳೆವಯಸ್ಸಿನಲ್ಲೆ ಒಂದು ಹೊಸಭಾಷೆಯನ್ನು ಕಲಿಯುವುದರಿಂದ ಕೆಲವರು ಹೆದರಿದಂತೆ ತಮ್ಮ ಮಾತೃಭಾಷೆಯನ್ನು ಮರೆಯುವುದಿಲ್ಲ. ಹಾಗಾಗುವುದೇ ಆಗಿದ್ದರೆ ಇಂಗ್ಲೀಷ್ ಮೀಡಿಯಂ ಸ್ಕೂಲುಗಳಲ್ಲಿ ಕಲಿತ ಕೊಂಕಣಿ, ಉರ್ದು, ಬ್ಯಾರೀ, ತುಳು, ಕೊಡವ ಮಕ್ಕಳು ಮನೆಯಲ್ಲಿ ಆಡುವ ತಮ್ಮ ಮಾತೃಭಾಷೆಯನ್ನು ಆಡಲಾರದ ಸ್ಥಿತಿ ಇವತ್ತು ಬಂದಿರುತ್ತಿತ್ತು. ಆದರೆ ಹಾಗಾಗಿಲ್ಲ. ಹಾಗೆಯೇ ಎಳೆ ಮಕ್ಕಳು ಎಲ್ಲವನ್ನೂ ತಮ್ಮ ಮಾತೃಭಾಷೆಯಲ್ಲೇ ಕಲಿಯಬೇಕೆಂಬುದೂ ಅಷ್ಟೇನೂ ತುರ್ತು ಗಮನಹರಿಸಬೇಕಾದ ಸಂಗತಿ ಎನಿಸುತ್ತಿಲ್ಲ. ಅದೇ ಒಂದು ಗಂಭೀರ ತೊಡಕಾದರೆ ಕರ್ನಾಟಕದ ಕನ್ನಡೇತರ ಮಾತೃಭಾಷೆಯ ಮಕ್ಕಳು ಏನು ಮಾಡಬೇಕು? ಮತ್ತು ಬೆಳೆದು ದೊಡ್ಡವರಾದ ಮೇಲೂ ನಾವೇಕೆ ಉನ್ನತ ಶಿಕ್ಷಣವನ್ನು ನಮ್ಮ ನಮ್ಮ ಮಾತೃಭಾಷೆಯಲ್ಲೇ ಕಲಿಯಬಾರದು? ಮಾತೃಭಾಷೆ ಎಂದಿದ್ದರೂ ಇಷ್ಟ ಮತ್ತು ಸುಲಭವಲ್ಲವೆ? ಕನ್ನಡೇತರ ಭಾಷೆ ತಮ್ಮ ಮನೆಮಾತಾಗಿದ್ದೂ ಹೊರಗೆ ಕನ್ನಡದಲ್ಲಿ ವ್ಯವಹರಿಸುತಿದ್ದ ಅದೇ ಮಕ್ಕಳು ಇಂಗ್ಲೀಷ್ ಮಾಧ್ಯಮದ ಶಿಕ್ಷಣದಿಂದಾಗಿ ಕನ್ನಡದಿಂದ ನಿಶ್ಚಯವಾಗಿಯೂ ದೂರವಾಗಿದ್ದಾರೆ. ವಿಚಿತ್ರವೆಂದರೆ ಮನೆಮಾತು ಕನ್ನಡವಾಗಿದ್ದ ಮಕ್ಕಳೂ ಹಾಗಾಗಿದ್ದಾರೆ! ಮನೆಯಲ್ಲಿ ಇವರು ಕನ್ನಡ ಬಳಸುತ್ತಿರಲಿಲ್ಲವೆ? ಮುಖ್ಯ ಕಾರಣ ಮನೆಮಾತಿನಂತಲ್ಲದೆ ಈ ಕನ್ನಡ ಎಂಬ ಭಾಷೆ ಓದುವ-ಬರೆಯುವ ಮಾಧ್ಯಮವಾಗಿ ಇಂಗ್ಲೀಷಿನ ಎದುರು ಸರಿಸಾಟಿಯಾಗಿ ನಿಲ್ಲಬೇಕಾದ ಹಂತದಲ್ಲಿ ಸೋತಿದ್ದು. ಈ ಸೋಲಿಗೆ ಉಪಶಮನ ಉಂಟೇ? ತರ್ಕ, ಚರ್ಚೆ ಈ ಬಗ್ಗೆ ನಡೆಯಬೇಕಾಗಿದೆ.
ಎಲ್ಲ ಇಂಗ್ಲೀಷ್ ಮೀಡಿಯಂ ಸ್ಕೂಲುಗಳನ್ನೂ ಕನ್ನಡದ ಸರಕಾರೀ ಶಾಲೆಗಳನ್ನೂ ಎಲ್ಲಾ ವಿಚಾರದಲ್ಲೂ ಅಂದರೆ ಅಲ್ಲಿನ ಫೀಸು, ಸವಲತ್ತುಗಳು, ಅಧ್ಯಾಪಕರ ಅರ್ಹತೆ ಮತ್ತು ಆತ ಅಥವಾ ಆಕೆಗೆ ಬೋಧಕ ವೃತ್ತಿಯಲ್ಲಿರುವ ಆಸಕ್ತಿ, ಕಲಿಕೆಯ ವಿಷಯಗಳು, ಕಲಿಕೆಯ ವಿಧಾನಗಳು - ಎಲ್ಲದರಲ್ಲೂ ಸಮಾನವೆನಿಸುವಂತೆ ಮಾಡುವ ಛಾತಿ ಇದ್ದರೆ ಆ ಮಾತು. ಬಿಸಿಯೂಟ, ಸೈಕಲ್ಲುಗಳಲ್ಲಿ ಓಟುಗಳ ಕನಸು ಕಾಣುತ್ತಿರುವ ಸರಕಾರಗಳಿಂದ ಅದೆಲ್ಲ ಸಾಧ್ಯವೆ? ಅಲ್ಲಿಯವರೆಗೆ ನಮ್ಮದೂ ವ್ಯರ್ಥ ಒಣ ಚರ್ಚೆ. 
Krupe:narendra, Mangalore