Monday 16 May 2011

ಮೈಸೂರು


ಮೈಸೂರು, ಉದ್ಯಾನ ನಗರಿ ಮತ್ತು ಅರಮನೆ ನಗರಿ ಎಂದೂ ಜನಜನಿತವಾಗಿರುವ ಮೈಸೂರು, ಕರ್ನಾಟಕ ರಾಜ್ಯದ ಎರಡನೇ ಅತಿದೊಡ್ಡ ಪಟ್ಟಣ. ಪೌರಾಣಿಕವಾಗಿ ಈ ನಗರದ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ಪ್ರಖ್ಯಾತ ಚಾಮುಂಡಿ ಬೆಟ್ಟವು ನಗರದ ಆಗ್ನೇಯ ಭಾಗದಲ್ಲಿದೆ.

ಕ್ರಿಸ್ತಶಕ 1400ರಿಂದ, ಹಿಂದೂ ಆಳ್ವಿಕೆದಾರರಾದ ಒಡೆಯರ್ ಅರಸರ ಮುಖ್ಯ ಪಟ್ಟಣವಾಗಿತ್ತು ಮೈಸೂರು. 1956ರಲ್ಲಿ, ಈ ರಾಜಾಡಳಿತದ ರಾಜ್ಯವು ಭಾರತದ ಗಣರಾಜ್ಯವನ್ನು ಸೇರಿಕೊಳ್ಳುವ ಮೂಲಕ ಮೈಸೂರಿನಲ್ಲಿ ಒಡೆಯರ್ ಆಳ್ವಿಕೆಯು ಕೊನೆಗೊಂಡಿತು. 18ನೇಶತಮಾನದಲ್ಲಿ ಸ್ವಲ್ಪ ಕಾಲ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರು ಮೈಸೂರು ಸಾಮ್ರಾಜ್ಯವನ್ನು ಆಳಿದ್ದರು. ಅವರ ಕಾಲದಲ್ಲಿ ಶ್ರೀರಂಗಪಟ್ಟಣವು ರಾಜಧಾನಿಯಾಗಿತ್ತು.

ಆದರೆ, ಟಿಪ್ಪು ಸುಲ್ತಾನನನ್ನು ಸೋಲಿಸಿದ ಬಳಿಕ ಬ್ರಿಟಿಷರು, ಮೈಸೂರನ್ನು ಮರಳಿ ಒಡೆಯರ್ ಅವರಿಗೆ ಒಪ್ಪಿಸಿಬಿಟ್ಟರು. ಕೋಟೆಯ ಮಿತಿಗೆ ಸೀಮಿತವಾಗಿದ್ದ ಮೈಸೂರು ಪಟ್ಟಣವು ಆಧುನಿಕ ನಗರ ಸಂಸ್ಕೃತಿಗೆ ಬದಲಾಗಲು ಆರಂಭವಾಗಿದ್ದು 3ನೇ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ. ಅದ್ಭುತ ಯೋಜನೆಗಳ ಮೂಲಕ ಮೈಸೂರನ್ನು ಅಭಿವೃದ್ಧಿಗೊಳಿಸಿದ್ದು ನಾಲ್ಮಡಿ ಕೃಷ್ಣರಾಜ ಒಡೆಯರ್. ವಿಸ್ತಾರವಾದ ರಸ್ತೆಗಳು, ಸುಂದರ ಕಟ್ಟಡಗಳು ಮತ್ತು ಆಕರ್ಷಕ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಿ ಅವರು ಮೈಸೂರಿಗೆ ಪ್ರಸಿದ್ಧಿ ತಂದುಕೊಟ್ಟರು.

ಮೈಸೂರು ಎಂಬುದು “ಮಹಿಷಾಸುರ” ಎಂಬ ಅಸುರನ ಹೆಸರಿನಿಂದ ಮೂಲವಾಗಿ ಬಂದಿದೆ. ಇದನ್ನು ಹಿಂದೆ “ಮಹಿಷಾಸುರನ ಊರು” ಎಂದೂ ಕರೆಯಲಾಗುತ್ತಿತ್ತು. ದೇವೀ ಭಾಗವತದಲ್ಲಿ ಬರುವ ಪೌರಾಣಿಕ ಕಥನಕ್ಕೆ ಮೈಸೂರು ಸಂಬಂಧ ಹೊಂದಿದೆ. ದೇವಿ ಪುರಾಣದಲ್ಲಿ ಇರುವ ಕಥೆಯ ಪ್ರಕಾರ, ರಾಕ್ಷಸ ದೊರೆ, ಕೋಣನ ತಲೆಯುಳ್ಳ ಮಹಿಷಾಸುರ ಎಂಬಾತನು ಮೈಸೂರು ಪಟ್ಟಣವನ್ನು ಆಳುತ್ತಿದ್ದನು. ಈ ರಾಕ್ಷಸನ ಉಪಟಳ ತಾಳಲಾರದೆ ದೇವಾನುದೇವತೆಗಳು ತಮ್ಮನ್ನು ರಕ್ಷಿಸುವಂತೆ ಪಾರ್ವತೀ ದೇವಿಯ ಮೊರೆ ಹೋದರು. 
ಪಾರ್ವತಿಯು ಚಾಮುಂಡೇಶ್ವರಿಯಾಗಿ ಅವತಾರವೆತ್ತಿ ಮೈಸೂರು ಸಮೀಪದ ಚಾಮುಂಡಿ ಬೆಟ್ಟದ ತುತ್ತ ತುದಿಯಲ್ಲಿ ಅಸುರನನ್ನು ಸಂಹರಿಸಿದಳು. ಇದೇ ಕಾರಣದಿಂದಾಗಿ ಬೆಟ್ಟಕ್ಕೆ ಚಾಮುಂಡಿ ಬೆಟ್ಟವೆಂದೂ, ನಗರಕ್ಕೆ ಮೈಸೂರು ಎಂದೂ ಹೆಸರು ಬಂತು. ರಕ್ಕಸನನ್ನುಸಂಹರಿಸಿದ ಬಳಿಕ ಶ್ರೀದೇವಿಯು ಬೆಟ್ಟದ ತುದಿಯಲ್ಲಿ ನೆಲೆ ನಿಂತಳು. ಅಂದಿನಿಂದ ಇಂದಿನವರೆಗೂ ದೇವಿಯನ್ನು ಅಲ್ಲಿ ಭಕ್ತಿ ಭಾವಗಳಿಂದ ಪೂಜಿಸಿಕೊಂಡು ಬರಲಾಗುತ್ತಿದೆ.

ಚಾಮುಂಡೇಶ್ವರಿಯು ಮಹಿಷಾಸುರನನ್ನು ವಧಿಸಿದ ಸತ್ಕಾರ್ಯದ ಸ್ಮರಣಾರ್ಥವಾಗಿ, ದುಷ್ಟ ಶಕ್ತಿಯ ಮೇಲೆ ಶಿಷ್ಟ ಶಕ್ತಿಯ ವಿಜಯದ ಸಂಕೇತವಾಗಿ ಪ್ರತಿವರ್ಷ 10 ದಿನಗಳ ಪ್ರಖ್ಯಾತ ದಸರಾ ಉತ್ಸವವನ್ನು ಇಲ್ಲಿ ಆಚರಿಸಲಾಗುತ್ತದೆ. ಇದು ಕರ್ನಾಟಕದ ನಾಡಹಬ್ಬವೆಂದೂ ಗುರುತಿಸಲ್ಪಟ್ಟಿದೆ.

ಮೈಸೂರು ಮಸಾಲೆ ದೋಸೆ ಮತ್ತು ಮೈಸೂರು ಪಾಕ್ ಮುಂತಾದ ಜನಪ್ರಿಯ ತಿಂಡಿಗಳಿಗೆ ಮೈಸೂರು ಪ್ರಸಿದ್ಧವಾಗಿದೆ. ಚಿರೋಟಿ, ಒಬ್ಬಟ್ಟು ಅಥವಾ ಹೋಳಿಗೆ ಮತ್ತು ಶಾವಿಗೆ ಪಾಯಸ ಮುಂತಾದ ಸಿಹಿ ತಿಂಡಿಗೂ ಮೈಸೂರು ನಿವಾಸಿಗಳು ಹೆಸರುವಾಸಿಯಾಗಿದ್ದಾರೆ.

ಮೈಸೂರು ರೇಷ್ಮೆ ಸೀರೆ ಎಂದೇ ಪ್ರಖ್ಯಾತವಾಗಿರುವ ಅತ್ಯಂತ ಜನಪ್ರಿಯ ರೇಷ್ಮೆ ಸೀರೆಯ ತವರೂರು ಕೂಡ ಮೈಸೂರು ಆಗಿದೆ. ಇದಲ್ಲದೆ, ಜನಪ್ರಿಯ ವರ್ಣಚಿತ್ರ ಕಲೆಯಾದ ಮೈಸೂರು ಚಿತ್ರಕಲೆಯೂ ವಿಶೇಷವಾಗಿ ಕಲಾ ವಲಯದಲ್ಲಿ ಪ್ರಸಿದ್ಧಿ ಪಡೆದಿದೆ.

ಪ್ರಖ್ಯಾತ ಕನ್ನಡ ಸಾಹಿತಿಗಳಾದ ಕುವೆಂಪು, ಗೋಪಾಲಕೃಷ್ಣ ಅಡಿಗ ಮತ್ತು ಯು.ಆರ್.ಅನಂತಮೂರ್ತಿ ಅವರೆಲ್ಲರಿಗೂ ಮೈಸೂರಿನ ಒಡನಾಟ ಸಾಕಷ್ಟಿದೆ. ಅವರು ತಮ್ಮ ಶಿಕ್ಷಣ ಪೂರೈಸಿದ್ದು ಮಾತ್ರವಲ್ಲದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬೋಧಕರಾಗಿಯೂ ಕಾರ್ಯನಿರ್ವಹಿಸಿದ್ದರು. ಪ್ರಖ್ಯಾತ ಆಂಗ್ಲ ಕಾದಂಬರಿಕಾರ ಮತ್ತು ಮಾಲ್ಗುಡಿ ಡೇಸ್ ಖ್ಯಾತಿಯ ಆರ್.ಕೆ.ನಾರಾಯಣ್ ಹಾಗೂ ಅವರ ವ್ಯಂಗ್ಯಚಿತ್ರಕಾರ ಸಹೋದರ ಆರ್.ಕೆ.ಲಕ್ಷ್ಮಣ್ ಅವರು ತಮ್ಮ ಜೀವನದ ಹೆಚ್ಚಿನ ಭಾಗವನ್ನು ಮೈಸೂರಿನಲ್ಲಿಯೇ ಕಳೆದಿದ್ದರು. 
ಕೃತಿಸ್ವಾಮ್ಯ © ಚಂದಮಾಮ.

No comments:

Post a Comment