Thursday 21 July 2011

ಕೇರಾಫ್ ಫುಟ್‌ಪಾತ್‌ನಿಂದ 3ಡಿ ರೂಮ್‌ಗೆ











    • ಕಿಶನ್‌ ಮಲ್ಟಿ ಡೈಮೆನ್ಶನ್‌ ಕಂಪೆನಿಯ ಸಿಇಒ

      • * ಕಿಶನ್‌ರಿಂದ 3ಡಿ ಕಂಪೆನಿ

        * ಆ ಕಂಪೆನಿಗೆ ಕಿಶನ್‌ ಸಿಇಓ

        * ಕರ್ನಾಟಕದ ಎರಡನೇ ಕಿರಿಯ ಸಿಇಓ

        * ಭಾರತಕ್ಕೆ ಮೊದಲು, ಏಷ್ಯಾದ ಎರಡನೇ ಕಂಪೆನಿ ಇದು

        * ಸ್ವದೇಶಿ 3ಡಿ ಸಿನಿಮಾ ತಂತ್ರಜ್ಞಾನ ಮತ್ತು ನಿರ್ಮಾಣದ ಉದ್ದೇಶ


        ಅತ್ಯಂತ ಚಿಕ್ಕ ವಯಸ್ಸಿಗೆ ನಿರ್ದೇಶಕನ ಪಟ್ಟ ಅಲಂಕರಿಸಿ ಗಿನ್ನಿಸ್‌ ದಾಖಲೆ ಬರೆದ ಪೋರ ಮಾಸ್ಟರ್‌ ಕಿಶನ್‌ (ಈಗ ಮಿಸ್ಟರ್‌ ಕಿಶನ್‌), ಇದೀಗ ಮತ್ತೂಂದು ಆಧುನಿಕ ದಾಖಲೆಗೆ ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಆ ಪ್ರಯತ್ನದ ಮೂಲಕ ಜಗತ್ತಿನ ಗಮನವನ್ನು ಭಾರತದತ್ತ ಸೆಳೆಯುವಂತಹ ಕಾರ್ಯಕ್ಕೂ ಅವರು ಮುಂದಡಿ ಇಟ್ಟಿದ್ದಾರೆ.
        ಇದೊಂದು ರೀತಿ, 'ಕೇರಾಫ್ ಫುಟ್‌ಪಾತ್‌'ನಿಂದ ನೇರ ಥ್ರಿಡಿ ರೂಮ್‌ ಕಡೆ ಪಯಣ...! ಅಂದರೆ, ಪ್ರಪಂಚಾದ್ಯಂತ ಹೆಚ್ಚು ಆಕರ್ಷಣೆಗೊಳಗಾಗುತ್ತಿರುವ ಮತ್ತು ಪ್ರಚಲಿತ ಚಾಲ್ತಿಯಲ್ಲಿರುವ 3ಡಿ ತಂತ್ರಜ್ಞಾನವನ್ನು ಭಾರತಕ್ಕೆ ಈಗಾಗಲೇ ಗೊತ್ತಿರುವುದಕ್ಕಿಂತ ಇನ್ನೂ ಹೆಚ್ಚು ತಿಳಿಸುವ ಕಾಯಕಕ್ಕೆ ಮುಂದಡಿ ಇಟ್ಟಿದ್ದಾರೆ ಕಿಶನ್‌.
        ಈ ನಿಟ್ಟಿನಲ್ಲಿ ಕೆಲಸ ಮಾಡುವುದಕ್ಕಾಗಿ, 'ಮಲ್ಟಿ ಡೈಮೆನ್ಶನ್‌ ಟೆಕ್ನಾಲಜಿ ಪ್ರೈವೇಟ್‌ ಲಿಮಿಟೆಡ್‌' ಹೆಸರಿನ ಕಂಪೆನಿಯೊಂದನ್ನು ತೆರೆಯಲಾಗಿದೆ.
        2ನೇ ಕಿರಿಯ ಸಿಇಒನಾಲ್ವರು ಪಾಲುದಾರರ ಪೈಕಿ ತಾವೂ ಒಬ್ಬರಾಗಿರುವ ಕಿಶನ್‌, ಈ ಮಲ್ಟಿ ಡೈಮೆನ್ಶನ್‌ ಕಂಪೆನಿಯ ಸಿಇಒ. 13ನೇ ವಯಸ್ಸಿಗೆ ನಿರ್ದೇಶಕನಾದರೆ, ಈಗ 16ನೇ ವಯಸ್ಸಿನಲ್ಲೇ ಸಿಇಓ ಆಗಿರುವುದು ಒಂದು ದಾಖಲೆಯೇ. ಇವರು ಕರ್ನಾಟಕದ 2ನೇ ಕಿರಿಯ ಸಿಇಒ.
        ಈ ಮೊದಲು ಸುಹಾಸ್‌ ಗೋಪಿನಾಥ್‌ 14ನೇ ವಯಸ್ಸಿನಲ್ಲಿ ಗ್ಲೋಬಲ್‌ ಇಂಕ್‌ ಸಿಇಒ ಆಗಿದ್ದರು. ಚಾರ್ಟೆಡ್‌ ಆಕೌಂಟೆಟ್‌ ಆಗಿರುವ ಸಂಜಯ್‌ ಧಾರಿವಾಲಾ, ಶ್ರೀನಿವಾಸಬಾಬು ಮತ್ತು ಶೈಲಜಾ ಶ್ರೀಕಾಂತ್‌ ಕಂಪೆನಿಯ ಇನ್ನುಳಿದ ಪಾಲುದಾರರು. ಸದ್ಯ, ಕಂಪೆನಿಯ ಪ್ರಧಾನ ಕಚೇರಿ ಬೆಂಗಳೂರಿನ ವಿಜಯನಗರದಲ್ಲಿದೆ. ತದನಂತರದಲ್ಲಿ ಹೈದರಬಾದ್‌, ಮುಂಬೈ, ಚೆನ್ನೈ ಮತ್ತಿತರೆಡೆ ಶಾಖಾ ಕಚೇರಿ ತೆರೆಯುವ ಆಲೋಚನೆ ಹೊಂದಲಾಗಿದೆ.
        ಉದ್ದೇಶವೇನು?:ವಿದೇಶದಿಂದ ಥ್ರಿಡಿ ಉಪಕರಣಗಳನ್ನು ಆಮದು ಮಾಡಿಕೊಂಡು, ಇಲ್ಲಿನ ತಂತ್ರಜ್ಞರನ್ನೇ ಬಳಸಿಕೊಂಡು ರಿಯಲ್‌ 3ಡಿ ಕ್ಯಾಮರಾದಲ್ಲಿ ಸಿನಿಮಾ, ಡಾಕ್ಯುಮೆಂಟರಿ, ಕಿರುಚಿತ್ರಗಳನ್ನು ತಯಾರು ಮಾಡುವುದು ಕಂಪೆನಿಯ ಪ್ರಮುಖ ಉದ್ದೇಶ. ಮೊದಲಿಗೆ ಕನ್ನಡದಲ್ಲಿ 3ಡಿ ಮಾಡಿ, ಬಳಿಕ ಇತರ ಭಾಷೆಗಳಿಗೆ ಅದನ್ನು ಡಬ್‌ ಮಾಡಿ ಅಲ್ಲಿನವರಿಗೂ ತೋರಿಸುವ ಪ್ರಯತ್ನವೂ ಕಂಪೆನಿಗಿದೆ.
        'ಇದು ತುಂಬಾ ಕಷ್ಟದ ಕೆಲಸವಾದರೂ ಭಾರತೀಯರು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ, ತೋರ್ಪಡಿಸುವ ಏಕೈಕ ಕಾರಣದಿಂದ ಈ ಕೆಲಸಕ್ಕೆ ಮುಂದಾಗಿರುವುದಾಗಿ' ಕಿಶನ್‌ ತಿಳಿಸುತ್ತಾರೆ.
        ಪ್ರಸ್ತುತ ಬಸವೇಶ್ವರನಗರದ ಕಾರ್ಮೆಲ್‌ ಕಾಲೇಜ್‌ನಲ್ಲಿ ಪಿಯುಸಿ ಕಾಮರ್ಸ್‌ ಕಲಿಯುತ್ತಿರುವ ಕಿಶನ್‌, ನಾಲ್ಕು ವರ್ಷಗಳಿಂದ 3ಡಿ ಕೋರ್ಸ್‌ ಮಾಡುತ್ತಿದ್ದಾರೆ. ಅಮೆರಿಕ, ಹಾಂಕಾಂಗ್‌, ಲಂಡನ್‌, ನ್ಯೂಜಿಲ್ಯಾಂಡ್‌ ಮತ್ತಿತರ ದೇಶಗಳ 3ಡಿ ಪರಿಣಿತರನ್ನು ಸಂಪರ್ಕಿಸಿ, ಅವರಿಂದ ತರಬೇತಿ ಪಡೆದು, ಮಾಹಿತಿ ಮತ್ತು ಸಲಹೆ-ಸೂಚನೆಗಳನ್ನು ತೆಗೆದುಕೊಂಡಿದ್ದಾರೆ.
        'ಮುಂದಿನ ತಿಂಗಳು ಮತ್ತೆ ಅಮೆರಿಕಕ್ಕೆ ತೆರಳಿ, ಅಲ್ಲಿ 'ಅಡ್ವಾನ್ಸ್‌ ಸ್ಟಿರಿಯೋಗ್ರಫಿ ಸರ್ಟಿಫಿಕೇಟ್‌' ಅನ್ನು ಪಡೆದುಕೊಳ್ಳಲಿದ್ದೇನೆ. ಆ ಬಳಿಕವಷ್ಟೇ ಇಲ್ಲಿನ 3ಡಿ 'ಮಲ್ಟಿ ಡೈಮೆನ್ಶನ್‌' ಕೆಲಸಗಳು ಅಧಿಕೃತವಾಗಿ ಶುರುವಾಗಲಿವೆ' ಎಂದು ಕಿಶನ್‌ ವಿವರಿಸುತ್ತಾರೆ.
        ಭಾರತದಲ್ಲಿ ಫ‌ಸ್ಟ್‌, ಏಷ್ಯಾದಲ್ಲಿ ಸೆಕೆಂಡ್‌:
        2ಡಿ ಯಿಂದ 3ಡಿ ಕನ್ವರ್ಷನ್‌, 3ಡಿ ರಿಯಲ್‌ ಸಿನಿಮಾ ತಯಾರಿಕೆ ಈಗಾಗಲೇ ಜಗತ್ತಿನಾದ್ಯಂತ ನಡೆಯುತ್ತಿದೆ. ಆದರೆ, ಇದುವರೆಗೆ ಭಾರತದಲ್ಲಿ ಇಂತಹದೊಂದು ಕಂಪೆನಿ ಅಥವಾ ಇಲ್ಲಿನ ತಂತ್ರಜ್ಞರಿಂದ ಆಧುನಿಕ ರಿಯಲ್‌ ಪ್ರಯತ್ನ ನಡೆದಿದ್ದಿಲ್ಲ.
        ಹಾಗಾಗಿ, 'ಮಲ್ಟಿ ಡೈಮೆನ್ಶನ್‌' ಭಾರತಕ್ಕೆ ಮೊದಲನೆಯದು. ಏಷ್ಯಾಕ್ಕೆ ಎರಡನೆಯದು. ಈಗಾಗಲೇ ಹಾಂಕಾಂಗ್‌ನಲ್ಲಿ '3ಡಿ ಮ್ಯಾಜಿಕ್‌' ಎಂಬ ಕಂಪೆನಿ ಇಂತಹದೊಂದು ಕೆಲಸದಲ್ಲಿ ತೊಡಗಿಸಿಕೊಂಡಿದೆ.
        ಹಾಗೆಂದು, ಇಷ್ಟರವರೆಗೆ ಭಾರತದಲ್ಲಿ 3ಡಿ ಸಿನಿಮಾ ಬಂದೇ ಇಲ್ಲ ಅಂತೆನಲ್ಲ. 'ಚೋಟ ಚೇತನ್‌' ನಮ್ಮ ಮೊದಲ 3ಡಿ ಸಿನಿಮಾ. ಆದರೆ, ಇದು ಮಲಯಾಳಂನಿಂದ ತೆಲುಗು-ತಮಿಳಿನ ಮೂಲಕ ಹಿಂದಿಗೆ ಬಂದಿದ್ದು. ಇದು ಹಳೆಯ ತಂತ್ರಜ್ಞಾನ ಬಳಸಿ ತಯಾರಾಗಿತ್ತು.
        ಇದು ಬಿಟ್ಟರೆ, 'ಅವತಾರ್‌'ನ ಉಪಕರಣಗಳನ್ನು ಬಳಸಿ ಮತ್ತು ಅಲ್ಲಿನ ತಂತ್ರಜ್ಞರಿಂದ ವಿಕ್ರಮ್‌ ಭಟ್‌ 'ಹಾಂಟೆಂಡ್‌' ತಯಾರಿಸಿದ್ದರು. ಈಗ ಕಿಶನ್‌ ತಯಾರಿಸಲು ಹೊರಟಿರುವ ಹೊಸ ಸಿನಿಮಾ, ಆಧುನಿಕ ತಂತ್ರಜ್ಞಾನ ಮತ್ತು ಇಲ್ಲಿನ ತಂತ್ರಜ್ಞರ ಪರಿಶ್ರಮದೊಂದಿಗೆ ಮೂಡಿಬರಲಿದೆ.
        ಕಥೆ, ಚಿತ್ರಕಥೆ, ನಿರ್ದೇಶನದ ಮೂರು ಜವಾಬ್ದಾರಿಗಳನ್ನು ಕಿಶನ್‌ ಅವರೇ ಹೊತ್ತುಕೊಂಡಿದ್ದಾರೆ. ರಿಯಲ್‌ 3ಡಿ ಕ್ಯಾಮರಾದಲ್ಲೇ ಈ ಸಿನಿಮಾ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗುತ್ತಿದೆ.
        'ಥ್ರಿಡಿ ತಂತ್ರಜ್ಞಾನ ಬಳಸಿ ಒರಿಜಿನಲ್‌ ಸಿನಿಮಾ ಮಾಡುವುದು ಬಹಳ ಕಷ್ಟ. ಯಾಕೆಂದರೆ, ಮಾಮೂಲಿ ಸಿನಿಮಾಗಳಿಗಿಂತ ಇದಕ್ಕೆ ಹೆಚ್ಚು ಹೆಚ್ಚು ಸಮಯ ವ್ಯಯಿಸಬೇಕು. ಒಂಚೂರು ಹೆಚ್ಚು-ಕಡಿಮೆಯಾದರೂ ವೀಕ್ಷಕರಿಗೆ ಕಣ್ಣು ನೋವು ತರಿಸುವ ಅಪಾಯವಿದೆ.
        ಹಾಗಾಗಿ, ಹೆಚ್ಚು ಪ್ರಚಲಿತದಲ್ಲಿದ್ದರೂ ಯಾರೊಬ್ಬರೂ ರಿಯಲ್‌ ಥ್ರಿಡಿ ಸಿನಿಮಾ ಮಾಡುವುದಕ್ಕೆ ಮುಂದೆ ಬರಲು ಹಿಂದೇಟು ಹಾಕುತ್ತಾರೆ. ಕಷ್ಟವಾದರೂ ಸಾಧಿಸಬೇಕೆಂಬ ಛಲದೊಂದಿಗೆ ಈ ಪ್ರಯತ್ನಕ್ಕೆ ಕೈ ಹಾಕಿದ್ದೇವೆ' ಎಂದು ಕಿಶನ್‌ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

    No comments:

    Post a Comment