Tuesday 5 July 2011

ಶಾಲಾ ಕಲಿಕೆ - ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ

ಎಲ್ಲೆಡೆ ಇದೇ ಮಾತು. ಮಕ್ಕಳನ್ನು ಯಾವ ಶಾಲೆಗೆ ಸೇರಿಸಿದರೆ ಉತ್ತಮ? ಮಕ್ಕಳಿಗೆ ಯಾವ ಶಾಲೆ ಅತ್ಯುತ್ತಮ ಕಲಿಕೆ ನೀಡಬಲ್ಲದು? ಯಾವ ಶಾಲೆಯಲ್ಲಿ ಜಗತ್ತಿನ ಎಲ್ಲಾ ಶಾಲೆಗಳಿಗಿಂತ ಉನ್ನತ ಮಟ್ಟದ ಪಠ್ಯ-ಕ್ರಮ ಹೇಳಿಕೊಡುವರು?! ಯಾವ ದೇಶದಲ್ಲಿ ವಾಸವಾದರೂ ಬದಲಾಗದ ಪಠ್ಯ-ಕ್ರಮ ಯಾವ ಶಾಲೆಯಲ್ಲಿ ಕಲಿಯಲು ಸಿಗುವುದು? ಅತಿ ಕಡಿಮೆ ಸಮಯದಲ್ಲಿ, ಅತಿ ಹೆಚ್ಚು ಪಾಠ ಹೇಳಿಕೊಡುವ ಕ್ರಮವಿರುವ ಶಾಲೆಯಾವುದು? ಹೀಗೆ ತಮ್ಮ ಮಕ್ಕಳ ಕಲಿಕೆ ಕುರಿತು ವಿಚಿತ್ರವಾದ ಕಳಕಳಿ ಮತ್ತು ಕಾಳಜಿ ಇಂದಿನ ತಂದೆ-ತಾಯಂದಿರಲ್ಲಿ ಹುಟ್ಟಿರುವುದು ಕಾಣುತ್ತಿದೆ.

ನಿಜ, ಒಳ್ಳೆಯ ಕಲಿಕೆಗಾಗಿ ಶಾಲೆಯ ಆಯ್ಕೆ ಪ್ರಕ್ರಿಯೆ ಮುಖ್ಯ. ಆದರೆ ಅದಕ್ಕೆ ಮುಂಚೆ ಕೇಳಬೇಕಾದ ಪ್ರಶ್ನೆಗಳು ಯಾವುವು? ಶಾಲೆಯ ಬಗ್ಗೆ ತಂದೆ-ತಾಯಂದಿರು ತಿಳಿದುಕೊಳ್ಳಬೇಕಾದ ಮಾಹಿತಿ ಯಾವುದು? ಒಳ್ಳೆಯ ಶಾಲಾ ಕಲಿಕೆಯಿಂದ ಏನೇನು ಅಪೇಕ್ಷಿಸಬೇಕು? ಏನೇನು ಅಪೇಕ್ಷಿಸಬಾರದು? ಇಂತಹ ಮೂಲ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರ ಇರಬೇಕಲ್ಲವೇ?
ಈ ಮೂಲ ಪ್ರಶ್ನೆಗಳಿಗೆ ನಮ್ಮೊಳಗೇ ಉತ್ತರವಿದೆ! ಅದು ಇನ್ನೊಂದಿಷ್ಟು ಸಣ್ಣ ಪ್ರಶ್ನೆಗಳ ಉತ್ತರಗಳಲ್ಲೇ ಅಡಗಿದೆ. ನೋಡೋಣ:
  1. ನಿಮ್ಮ ಮಕ್ಕಳು ಹೋಗುವ ಶಾಲೆ ನಿಮ್ಮ ಮನೆಗೆ ಹತ್ತಿರ ಇರಬೇಕಾ?
  2. ಈ ಶಾಲೆಯಲ್ಲಿ ಏನೇನು ಸೌಲಭ್ಯಗಳು ಇರಬೇಕು?
  3. ಈ ಶಾಲೆಯಲ್ಲಿ ಎಷ್ಟನೆಯ ತರಗತಿಯ ವರೆಗು ಕಲಿಕೆ ಸಿಗುವಂತಿರಬೇಕು?
  4. ಈ ಶಾಲೆಯಲ್ಲಿ ಕಲಿಸಲಾಗುವ ಪಠ್ಯ-ಕ್ರಮ ಯಾವುದಾಗಿರಬೇಕು? ಅಂತಹ ಪಠ್ಯ-ಕ್ರಮ ನಿಮ್ಮ ಮಕ್ಕಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ?
  5. ಈ ಪಠ್ಯ-ಕ್ರಮ ಇತರ ಕ್ರಮಗಳಿಗಿಂತ ಭಿನ್ನವಾಗಿರುವುದೂ ಶಾಲೆಯ ಗುರಿಯಾಗಿರಬೇಕೇ? ಈ ಶಾಲೆಯ ಪಠ್ಯ-ಕ್ರಮದ ಗುರಿ ಅತಿ ಹೆಚ್ಚು ಕಲಿಕೆಯನ್ನು ಅತಿ ಕಡಿಮೆ ಸಮಯದಲ್ಲಿ ನೀಡುವುದಾಗಿರಬೇಕೇ?
  6. ಸುತ್ತಲು ಇರುವ ಶಾಲೆಗಳಲ್ಲಿ ಒಂದನ್ನು ಉತ್ತಮ ಶಾಲೆ ಅಂತ ಕರೆಯಲು ಸಾಧ್ಯವೇ? ಇದಕ್ಕೆ ನೀವು ಉಪಯೋಗಿಸುವ ಅಳತೆಗೋಲುಗಳಾವುವು?
  7. ಶಾಲೆಯ ಹೊರಗೆ, ಸಮಾಜದಲ್ಲಿ ಕಾಣುವ ಪೈಪೋಟಿಗೆ ಈ ಶಾಲೆ ನಿಮ್ಮ ಮಕ್ಕಳನ್ನು ಸಿದ್ಧ ಮಾಡಬೇಕೆ? ನಿಮ್ಮ ಸುತ್ತಲಿನ ಇಂದಿನ ಪರಿಸ್ಥಿತಿಗೇ ನಿಮ್ಮ ಮಕ್ಕಳನ್ನೂ ತಯ್ಯಾರಿ ಮಾಡಬೇಕೇ? ಅಥವಾ ಹೊರಗಿನ ಆ ಪರಿಸ್ಥಿತಿಯನ್ನೇ ಪ್ರಶ್ನಿಸಿ, ಸುಧಾರಣೆ ಮಾಡುವಂತವರಾಗಿಸಬೇಕೋ? (ಇಲ್ಲಿ ಪೈಪೋಟಿ ಬೇಡವೆಂದು ಹೇಳುತ್ತಿಲ್ಲ..)
  8. ಈ ಶಾಲೆಯಲ್ಲಿ ಕಲಿಸುವ ಮಾಧ್ಯಮ (ಭಾಷೆ) ಶಾಲೆಯ ಆಯ್ಕೆಯಲ್ಲಿ ಯಾವ ಪಾತ್ರ ವಹಿಸುತ್ತದೆ?
  9. ಕಲಿಕೆಯಲ್ಲಿ ಮಾಧ್ಯಮ ಮುಖ್ಯವಲ್ಲದಿದ್ದರೆ, ಯಾವ ಭಾಷೆಯಲ್ಲಾದರೂ ಕಲಿಸುವ ಶಾಲೆಯನ್ನೂ ನೀವು ಪರಿಗಣಿಸುವಿರಾ? ನಿಮ್ಮ ಮನೆಯೊಳಗೂ ಇದೇ ಭಾಷೆಯ ಮೂಲಕ ಕಲಿಕೆ ನಡೆಸಲು ಮುಂದಾಗುವಿರಾ? ಹಾಗೇಕೆ ಮಾಡುವಿರಿ?! ಸಹಜವಾದ ತಾಯ್ನುಡಿಯ ಬಳಕೆ ಏಕೆ ಸಲ್ಲದು ಎಂದು ಯೋಚನೆ ಮಾಡುತ್ತೀರಾ?
  10. ಭಾಷೆಯ ಕಲಿಕೆಗೂ, ಕಲಿಕೆಯ ಮಾಧ್ಯಮ ಭಾಷೆಗೂ ವ್ಯತ್ಯಾಸವನ್ನು ಮನಗಂಡು ಶಾಲೆಯ ಆಯ್ಕೆ ಮಾಡುವುದು ಸರಿ ಅನಿಸುತ್ತದೆಯೇ?
ಒಂದು ಸಮಾಜವಾಗಿ ಇಂತಹ ಮುಖ್ಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ನಮ್ಮ ಹೊಣೆಯೇ ಆಗಿದೆ. ನಮ್ಮ ಅವಶ್ಯಕತೆಗಳನ್ನು ನಾವೇ ಅರಿಯಬೇಕಾಗಿದೆ, ಅದಕ್ಕೆ ತಕ್ಕಂತ ಉತ್ತರಗಳನ್ನೂ, ಅಪೇಕ್ಷೆಗಳನ್ನೂ ಕಲಿಕೆಯಿಂದ ನಾವು ಇಟ್ಟುಕೊಳ್ಳಬೇಕಾಗಿದೆ. ಇಷ್ಟು ದಿನ ಹಾಗೆ ಮಾಡದೇ ಇದ್ದರಿಂದಲೇ ನಾವು ಅಲ್ಲಿ ಇಲ್ಲಿ ಕಾಣುವ ಕಲಿಕಾ ವ್ಯವಸ್ಥೆಗಳನ್ನು ಕಣ್ಣು ಮುಚ್ಚಿ ಅನುಕರಣೆ ಮಾಡಲು ಹೊರಟಿರುವುದು.
ಮಕ್ಕಳಿಗೆ ಶಾಲಾ ಕಲಿಕೆಯನ್ನು ಮನೆಯಲ್ಲಿನ ಕಲಿಕೆಯಷ್ಟೇ ಸುಲಭ, ಮತ್ತು ಆನಂದಮಯ ಅನುಭವವಾಗಿಸಲು, ಈ ಕಾರಣದಿಂದ ಕಲಿಕೆಯ ಪ್ರಭಾವವನ್ನೂ ಅತಿ ಹೆಚ್ಚಾಗಿಸಲು ಈ ಎಲ್ಲಾ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳುವುದು ಒಳ್ಳೆಯದು. ಶಾಲಾ ಕಲಿಕೆಯನ್ನು ಹೂವಿನ ಮುಳ್ಳಂತೆ ಆಗುವುದು ತಪ್ಪಿಸುವುದು ನಮ್ಮೆಲ್ಲರ ಏಳ್ಗೆಗೆ ಬುನಾದಿ.

No comments:

Post a Comment