Friday 4 November 2011

ಮಕ್ಕಳು ಶಿಕ್ಷಕರೊಂದಿಗೆ ಹೇಗೆ ವರ್ತಿಸಬೇಕು?

ವಿದ್ಯಾರ್ಥಿ ಮಿತ್ರರೇ, ನಮಗೆ ಆದರ್ಶವಾಗಿರುವವರು ಹಾಗೂ ಪ್ರತಿದಿನ ಹೊಸಹೊಸ ಜ್ಞಾನವನ್ನು ನೀಡುವವರೆಂದರೆ ಶಿಕ್ಷಕರು. ಶಿಕ್ಷಕರು ನಮಗಾಗಿ ತಮ್ಮ ತನು, ಮನದ ತ್ಯಾಗವನ್ನು ಮಾಡುತ್ತಾರೆ. ಅವರು ನಮಗೆ ಪ್ರತಿದಿನ ಜ್ಞಾನ ನೀಡಲು ಶ್ರಮಿಸುತ್ತಿರುತ್ತಾರೆ. ನಮಗಾಗಿ ಅವರು ಯಾವುದೇ ತ್ಯಾಗ ಮಾಡಲು ಸಿದ್ಧರಿರುತ್ತಾರೆ. ಇಂತಹ ಶಿಕ್ಷಕರೊಂದಿಗೆ ನಮ್ಮ ವರ್ತನೆ ಹೇಗಿರಬೇಕು? ವಿದ್ಯಾರ್ಥಿ ಮಿತ್ರರೇ, ನಾವು ಅವರೊಂದಿಗೆ ಕೃತಜ್ಞತಾ ಭಾವದಿಂದ ವರ್ತಿಸಬೇಕು. ಅವರಿಂದಾಗಿ ನಮಗೆ ಜೀವನದ ದಿಕ್ಕು ಸಿಗುತ್ತದೆ. ನಮಗೆ ಬಾಲ್ಯಾವಸ್ಥೆಯಲ್ಲಿ ಸರಿ-ತಪ್ಪು ಯಾವುದೆಂದು ತಿಳಿಯುವುದಿಲ್ಲ. ಅದುದರಿಂದ ಶಿಕ್ಷಕರೇ ನಮಗೆ ಒಳ್ಳೆಯ ಅಂಶಗಳನ್ನು ತಿಳಿಸಿ ಹೇಳುತ್ತಾರೆ. ಇದನ್ನೆಲ್ಲ ಮಾಡುವಾಗ ಅವರು ಕೆಲವೊಮ್ಮೆ ನಮ್ಮ ಮೇಲೆ ಸಿಟ್ಟು ಮಾಡುತ್ತಾರೆ, ಕೆಲವೊಮ್ಮೆ ಹೊಡೆಯುತ್ತಾರೆ, ಕೆಲವೊಮ್ಮೆ ಬೈಯುತ್ತಾರೆ! ಆದರೆ ಇದರ ಅರ್ಥ ಅವರು ನಮ್ಮನ್ನು ಪ್ರೀತಿಸುವುದಿಲ್ಲವೆಂದಲ್ಲ. ‘ನೀವು ಒಳ್ಳೆಯ ಸಂಸ್ಕಾರವಂತ ಮತ್ತು ಜ್ಞಾನಿಯಾಗಬೇಕು’ ಎನ್ನುವುದು ಅವರ ಉದ್ದೇಶವಾಗಿರುತ್ತದೆ. ಒಳ್ಳೆಯ ಧ್ಯೇಯದಿಂದ ಅವರು ಕೆಲವೊಮ್ಮೆ ಕಠೋರವಾಗುತ್ತಾರೆ. ನಮಗೆ ಬಾಲ್ಯಾವಸ್ಥೆಯಲ್ಲಿ ಅದು ತಿಳಿಯುವುದಿಲ್ಲ. ಅದರಿಂದ ಕೆಲವು ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಉದ್ಧಟತನದಿಂದ ವರ್ತಿಸುತ್ತಾರೆ. ಅವರಿಗೆ ಎದುರುತ್ತರ ನೀಡುತ್ತಾರೆ ಮತ್ತು ಅವರ ಮಾತನ್ನು ಕೇಳುವುದಿಲ್ಲ.
ಅಲ್ಲದೇ ಈಗಿನ ಕೆಲವು ಮಕ್ಕಳು ಶಿಕ್ಷಕರನ್ನು ಹಿಂದಿನಿಂದ ಅಣಕಿಸುತ್ತಾರೆ. ಶಿಕ್ಷಕರು ತರಗತಿಯಲ್ಲಿ ಕಲಿಸುತ್ತಿರುವಾಗ ಅವರಿಗೆ ಕೇಳಿಸದಂತೆ ತಮ್ಮೊಳಗೆ ಅವರ ಅಪಹಾಸ್ಯ ಮಾಡುತ್ತಾರೆ. ಇದರಿಂದ ಇತರ ಎಲ್ಲ ಮಕ್ಕಳೂ ಶಿಕ್ಷಕರನ್ನು ನೋಡಿ ನಗುತ್ತಾರೆ. ಇದೆಲ್ಲ ಅಯೋಗ್ಯವಾಗಿದೆ.

No comments:

Post a Comment