Sunday 21 August 2011

ಸದ್ಯದ ಶಿಕ್ಷಣ ಪದ್ಧತಿ ಮತ್ತು ಶಿಕ್ಷಕರ ಕರ್ತವ್ಯ

Article Image

ಈಗಿನ ಕಾಲದಲ್ಲಿ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸುವಲ್ಲಿ ಶಿಕ್ಷಕರದ್ದು ಬಹುದೊಡ್ಡ ಪಾತ್ರವಿದೆ. ಶಿಕ್ಷಕರು ಸಾಧನೆಯನ್ನು ಮಾಡುತ್ತಿದ್ದಲ್ಲಿ ಅವರು ಸಹಜವಾಗಿ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸಬಹುದು. ಪ್ರಾಚೀನ ಕಾಲದಲ್ಲಿದ್ದ ಶಿಕ್ಷಣ ಪದ್ಧತಿಯಲ್ಲಿ ಇದನ್ನು ನಾವು ನೋಡಬಹುದಾಗಿತ್ತು, ಆದರೆ ಈಗಿನ ಶಿಕ್ಷಣ ಪದ್ಧತಿಯು ಪಾಶ್ಚಾತ್ಯರ ವಿಚಾರಧಾರೆಯ ಮೇಲೆ ಆಧರಿಸಲಾಗಿದೆ. ಇದನ್ನು ಆಧರಿಸಿ ಶಿಕ್ಷಕರೊಬ್ಬರು ಬರೆದ ಲೇಖನವನ್ನು ಇಲ್ಲಿ ನೀಡುತ್ತಿದ್ದೇವೆ.
೧. ಆಶ್ರಮದಲ್ಲಿನ ಸಾತ್ತ್ವಿಕ ವಾತಾವರಣದ ಲಾಭವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಆಗುವುದು
ಹಿಂದೆ ಭಾರತದಲ್ಲಿ ಗುರುಕುಲ ಶಿಕ್ಷಣ ಪದ್ಧತಿಯಿತ್ತು. ಇದರಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯ ಹೊಣೆ ಶಿಕ್ಷಕರ ಮೇಲಿತ್ತು. ವಿದ್ಯಾರ್ಥಿಗಳು ಗುರುಗಳ ಮನೆಯಲ್ಲಿದ್ದು ವಿದ್ಯಾರ್ಜನೆ ಮಾಡುತ್ತಿದ್ದರು. ’ಆಚಾರ್ಯ ದೇವೋ ಭವ’ ಎಂಬ ಗೌರವವು ವಿದ್ಯಾರ್ಥಿಗಳ ಮನದಲ್ಲಿ ಮೂಡಿರುತ್ತಿತ್ತು. ಆಚಾರ್ಯರು ಸ್ವತಃ ಸಾಧನೆ ಮಾಡುತ್ತಿದ್ದರು ಮತ್ತು ಅದೇ ಸಂಸ್ಕಾರವನ್ನು ಅವರು ಮಕ್ಕಳಲ್ಲಿ ಮೂಡಿಸುತ್ತಿದ್ದರು. ಅದಲ್ಲದೇ ಆಶ್ರಮದಲ್ಲಿನ ಸಾತ್ತ್ವಿಕ ವಾತಾವರಣದ ಲಾಭವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಆಗುತ್ತಿತ್ತು.

೨. ಶಾಲೆಯ ಪದ್ಧತಿಯಲ್ಲಿ ಆದ ಬದಲಾವಣೆಗಳು
ಅ. ಶಾಲೆಗೆ ಹೋದರೆ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಆಗುವುದು ಎಂಬ ಖಾತ್ರಿ ಪಾಲಕರಲ್ಲಿರುವುದು
ಹಿಂದಿನ ಕಾಲದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಿದ್ದರು. ಅವರ ಯೋಗ್ಯ ಆಚಾರ, ವಿಚಾರವು ಮಕ್ಕಳಿಗೆ ಅನುಕರಣೀಯವಾಗಿತ್ತು. ಹಾಗಾಗಿ ಶಾಲೆಗೆ ಹೋದರೆ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಆಗುವುದು ಎಂಬ ಖಾತ್ರಿ ಪಾಲಕರಲ್ಲಿತ್ತು.

ಆ. ’ಸಂಸ್ಕಾರ, ಧರ್ಮಾಚರಣೆ’ ಇವು ಸಮಾಜದಲ್ಲಿ ಲೋಪವಾದಂತೆ ಸಮಾಜದ ಅಧಃಪತನವು ಪ್ರಾರಂಭವಾಯಿತು.
ಶಿಕ್ಷಣ ಪದ್ಧತಿಯಲ್ಲಿ ಪಾಶ್ಚಾತ್ಯರ ಪ್ರಭಾವ ಹೆಚ್ಚಾಗುತ್ತಿಂತೆ ಶಿಕ್ಷಕರಲ್ಲಿ ಬದಲಾವಣೆಯು ಶುರುವಾಯಿತು. ಮುಂದೆ ಆಂಗ್ಲ ಮಾಧ್ಯಮದಲ್ಲಿ ಶಾಲೆಗಳು ಪ್ರಾರಂಭವಾಯಿತು. ಶಿಕ್ಷಕರಿಗೆ ’ಸರ್, ಮೇಡಮ್’ ಎಂದು ಕರೆಸಿಕೊಳ್ಳುವುದರಲ್ಲಿಯೇ ಧನ್ಯತೆ ಎನಿಸಲು ಪ್ರಾರಂಭವಾಯಿತು. ಇದೇ ಸಂಸ್ಕಾರವು ಮಕ್ಕಳಲ್ಲಿ ಮೂಡಲು ಪ್ರಾರಂಭವಾಯಿತು. ’ಸಂಸ್ಕಾರ, ಧರ್ಮಾಚರಣೆ’ ಇವು ಸಮಾಜದಲ್ಲಿ ಲೋಪವಾದಂತೆ ಸಮಾಜದ ಅಧಃಪತನವು ಪ್ರಾರಂಭವಾಯಿತು.

೩. ಇತರ ಧರ್ಮೀಯರ ಶಿಕ್ಷಣ ಪದ್ಧತಿ
ಇತರ ಧರ್ಮೀಯರಲ್ಲಿ ಶಾಲೆಯ ಶಿಕ್ಷಣದ ಜೊತೆ ಧರ್ಮದ ಶಿಕ್ಷಣವನ್ನು ನೀಡಲು ವ್ಯವಸ್ಥೆ ಇರುತ್ತದೆ. ಕೇವಲ ಹಿಂದೂ ಮಕ್ಕಳಲ್ಲಿ ಈ ರೀತಿಯ ಶಿಕ್ಷಣವು ಸಿಗುವುದಿಲ್ಲ.

೪. ಸಮಾಜದ ಸ್ಥಿತಿ
ಈಗಿನ ವ್ಯಸ್ತ ಜೀವನ ಶೈಲಿಯಲ್ಲಿ ಮಕ್ಕಳು ಸಂಸ್ಕಾರಯುತರಾಗದಿರಲು ಅನೇಕ ಕಾರಣಗಳಿವೆ. ಈಗಿನ ವಿಭಕ್ತ ಕುಟುಂಬಗಳಿಂದಾಗಿ ಮನೆಯಲ್ಲಿ ಸಂಸ್ಕಾರವನ್ನು ನೀಡಲು ಅಜ್ಜ, ಅಜ್ಜಿ  ಇರುವುದಿಲ್ಲ. ಹಾಗಾಗಿ ಚಿಕ್ಕ ಮಕ್ಕಳನ್ನು ಸಾಕುವ ಮನೆಗಳಿಗೆ ಕಳಿಸಲಾಗುತ್ತಿದೆ. ಇಲ್ಲವಾದರೆ ಮನೆಯಲ್ಲಿ ಕುಳಿತು ದೂರದರ್ಶನ ವೀಕ್ಷಿಸುತ್ತಾ ಸಮಯ ವ್ಯರ್ಥ ಮಾಡಲಾಗುತ್ತಿದೆ. ಹಾಗಾಗಿ ಮಕ್ಕಳಿಗೆ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂದು ಹೇಳುವವರೇ ಇಲ್ಲವಾಗಿದೆ.

೫. ರಾಜಕೀಯ ಪರಿಸ್ಥಿತಿ
ಹಿಂದಿನ ಕಾಲದಲ್ಲಿ ರಾಜರೂ ಸಹ ಧರ್ಮಾಚರಣೆ ಮಾಡುತ್ತಿದ್ದರು ಮತ್ತು ಅವರು ಋಷಿಮುನಿಗಳ ಮಾರ್ಗದರ್ಶನದಂತೆ ರಾಜ್ಯಭಾರ ಮಾಡುತ್ತಿದ್ದರು. ಆದರೆ ಈಗಿನ ರಾಜಕಾರಣಿಗಳು ಧರ್ಮಾಚರಣೆ ಮಾಡದಿರುವ ಕಾರಣ ಹಿಂದೂ ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆಯನ್ನು ಮಾಡಲು ಅವರು ಅಸಮರ್ಥರಿದ್ದಾರೆ. ಶಿಕ್ಷಣ ಸಂಸ್ಥೆಗಳು ಸಹ ಇದೇ ರಾಜಕಾರಣಿಗಳದ್ದು ಆಗಿರುವುದರಿಂದ ಸಂಸ್ಕಾರಯುತ ಮಕ್ಕಳಿಗೆ ಇರಲಿ ಚೆನ್ನಾಗಿ ಓದುವ ಮಕ್ಕಳಿಗೆ ಸಹ ಇಲ್ಲಿ ಜಾಗ ಸಿಗುವುದು ಕಷ್ಟವಿದೆ.

೬. ಈಗಿನ ಶಿಕ್ಷಣ ಪದ್ಧತಿ
ಪ್ರಚಲಿತ ಶಿಕ್ಷಣ ಪದ್ಧತಿಯು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಕುಗ್ಗಿಸುತ್ತಿದೆ. ಮಕ್ಕಳಿಗೆ ಶಿಕ್ಷಣದ ಆನಂದಕ್ಕಿಂತ ಪರೀಕ್ಷೆಯ ಭಯವೇ ಹೆಚ್ಚಾಗಿದೆ. ಈಗಿನ ಶಿಕ್ಷಣ ಪದ್ಧತಿಯಿಂದ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸಲು ಸಾಧ್ಯವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕಾಗಿದ್ದಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದಿದೆ. ಶಿಕ್ಷಕರು ಸಾಧಕರಾಗಿದ್ದಲ್ಲಿ, ಮಕ್ಕಳಿಗೆ ಅವರು ಒಳ್ಳೆಯ ಸಂಸ್ಕಾರವನ್ನು ನೀಡಬಹುದು. ಹಾಗಿದ್ದರೆ ಶಿಕ್ಷಕರು ಸಾಧಕರಾಗಲು ಏನು ಮಾಡಬೇಕು?

ಅ. ದೈನಂದಿನ ಜೀವನದಲ್ಲಿ ನಡೆಯುವ ಪ್ರತಿಯೊಂದು ಪ್ರಸಂಗದ ಕಾರಣವನ್ನು ಹುಡುಕಿ ಅದಕ್ಕೆ ಉಪಾಯವನ್ನು ಹೇಳುವುದು ಎಂದರೆ ಸಾಧನೆ ಕಲಿಸುವುದು
ಪಠ್ಯಕ್ರಮದಲ್ಲಿರುವ ತಾತ್ತ್ವಿಕ ಮಾಹಿತಿಯನ್ನು ಕಲಿತು ಮಕ್ಕಳಿಗೆ ಆನಂದ ಸಿಗುವುದಿಲ್ಲ. ಅದಕ್ಕಾಗಿ ಪಠ್ಯಕ್ರಮದ ಹೊರತಾಗಿ ಪ್ರತಿಯೊಂದು ಪ್ರಸಂಗದ ಅಧ್ಯಾತ್ಮೀಕರಣ ಮಾಡಬೇಕು. ದೈನಂದಿನ ಜೀವನದಲ್ಲಿ ನಡೆಯುವ ಪ್ರತಿಯೊಂದು ಪ್ರಸಂಗದ ಕಾರಣವನ್ನು ಹುಡುಕಿ ಅದಕ್ಕೆ ಉಪಾಯವನ್ನು ಹೇಳುವುದು ಎಂದರೆ ಸಾಧನೆ ಕಲಿಸುವುದು

ಆ. ಧರ್ಮಾಚರಣೆ ಮತ್ತು ಸಾಧನೆ
ಸ್ವತಃ ತಾವು ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಿ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಬೇಕು. ವಿದ್ಯಾರ್ಥಿಗಳಿಗೆ ಸಾಧನೆಯನ್ನು ಸುಲಭವಾಗಿ ಹೇಳಲು ಶಿಕ್ಷಕರಿಗೆ ಬರಬೇಕು.

ಇ. ಅಭ್ಯಾಸುವೃತ್ತಿ
ಸತತವಾಗಿ ಸತ್ಯವನ್ನು ಅರಿಯುವ ಜಿಜ್ಞಾಸು ವೃತ್ತಿ ಇರಬೇಕು.

ಉ. ಕೃತಿ
ಕೇವಲ ಉಪದೇಶ ಮಾಡದೆ ಕೃತಿಯಿಂದ ಕಲಿಸಬೇಕು.

೭. ಸಂಸ್ಕಾರ ಮತ್ತು ಧರ್ಮಾಚರಣೆಯನ್ನು ಕಲಿಸಲು ವಿವಿಧ ಉಪಕ್ರಮಗಳು  

  • ಶಾಲೆಯ ಗ್ರಂಥಾಲಯದಲ್ಲಿ ಸಂಸ್ಕಾರ ಮತ್ತು ಧರ್ಮಾಚರಣೆಯ ಪುಸ್ತಕಗಳನ್ನು ಇಡಬೇಕು.
  • ಶಾಲೆಯ ಸಮಯದ ನಂತರ ಸಂಸ್ಕಾರವರ್ಗಗಳ ಆಯೋಜನೆ ಮಾಡುವುದು.
  • ಮಕ್ಕಳ ಪ್ರಗತಿಯ ಕುರಿತು ಪಾಲಕರೊಂದಿಗೆ ಮಾತನಾಡುವುದು.
  • ಶಾಲೆಯ ಕಾರ್ಯಕ್ರಮಗಳಲ್ಲಿ ಧರ್ಮಾಚರಣೆ ಮಾಡುವವರ, ಸಂತರ, ಸಾಧಕರ ಮಾರ್ಗದರ್ಶನದ ಆಯೋಜನೆ ಮಾಡುವುದು.
  • ಇತರ ಶಿಕ್ಷಕರಿಗೂ ಧರ್ಮಾಚರಣೆ, ಸಾಧನೆಯ ಕುರಿತು ತಿಳಿಸುವುದು.
  • ಇಷ್ಟನ್ನು ಶಿಕ್ಷಕರು ಮಾಡಿದರೆ ಸಮಾಜ ಸುಸಂಸ್ಕಾರಯುತವಾಗಲು ಸಹಾಯವಾಗುತ್ತದೆ. ಹೀಗೆ ಮಾಡಿದಲ್ಲಿ ಋಷಿ ಋಣ ಮತ್ತು ಸಮಾಜ ಋಣವನ್ನು ತೀರಿಸಿ ಅವರು ಈಶ್ವರನ ಕೃಪೆಗೆ ಪಾತ್ರರಾಗುತ್ತಾರೆ.
- ಸೌ. ವಂದನಾ ಕರಾಚೆ, ಶಿಕ್ಷಕಿ, ಪಿಂಪರಿ.

No comments:

Post a Comment